ಕರೊನಾ ಸಂಕಷ್ಟದಲ್ಲಿದ್ದ ಜನರಿಗೆ ನೆರವು

1 bkt 1
Published on

ಬಾದಾಮಿ: ಬೆಲೆ ಏರಿಕೆಯನ್ನು ಕಾಂಗ್ರೆಸ್ ಪಕ್ಷದವರು ಪೆಡಂಭೂತ ಎಂಬಂತೆ ತೋರಿಸುತ್ತಿದ್ದಾರೆ. ಆದರೆ, ದೇಶದ ಎಲ್ಲ ಸಂಪನ್ಮೂಲವನ್ನು ನಾವು ಕರೊನಾ, ಪ್ರವಾಹಕ್ಕೆ ಬಳಕೆ ಮಾಡಿದ್ದೇವೆ. ಕರೊನಾ ಸಂಕಷ್ಟದಲ್ಲಿದ್ದ ಜನರನ್ನು ಬದುಕಿಸುವ ಕೆಲಸ ಮಾಡಿದ್ದೇವೆ. ಇದೆಲ್ಲ ವಿರೋಧ ಪಕ್ಷ ಕಾಂಗ್ರೆಸ್ ಪಕ್ಷದವರ ಕಣ್ಣಿಗೆ ಕಾಣಿಸುವುದಿಲ್ಲವೇ? ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಎಂದು ಪ್ರಶ್ನಿಸಿದರು.

ದೇಶದ 80 ಕೋಟಿ ಜನರಿಗೆ ಉಚಿತವಾಗಿ ಆಹಾರ ಕೊಟ್ಟಿದ್ದೇವೆ. ಔಷಧೋಪಚಾರಕ್ಕಾಗಿ ಹಣ ಖರ್ಚು ಮಾಡಿದ್ದೇವೆ. ದೇಶದಲ್ಲಿ ಉತ್ಪಾದನೆ ಸಂಪೂರ್ಣ ಬಂದ್ ಆಗಿತ್ತು. ಆರು ತಿಂಗಳು ಕಾರ್ಖಾನೆ, ಬಸ್, ರೈಲು ಬಂದ್ ಆಗಿದ್ದವು. ವ್ಯಾಪಾರ-ವಹಿವಾಟು ಸ್ಥಗಿತಗೊಂಡಿತ್ತು. ಇದೆಲ್ಲವನ್ನು ನಿರ್ವಹಣೆ ಎಲ್ಲಿಂದ ಮಾಡೋದು? ಸರ್ಕಾರದ ಬೊಕ್ಕಸಕ್ಕೆ ಆದಾಯ ಬರಲಿಲ್ಲ. ಖರ್ಚು-ವೆಚ್ಚಗಳು ಹೆಚ್ಚಾದವು. ಇಂತದ್ದರಲ್ಲಿ ನಿರ್ವಹಣೆ ಮಾಡೋದು ಕಷ್ಟ ಆಗಿತ್ತು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದನ್ನು ಸಮರ್ಥವಾಗಿ ಎದುರಿಸಿದವು. ನರೇಂದ್ರ ಮೋದಿ ಸರ್ಕಾರ ಯುದ್ಧದ ರೀತಿ ದೇಶದ 130 ಕೋಟಿ ಜನರನ್ನು ರಕ್ಷಣೆ ಮಾಡಲು ಎಲ್ಲ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಆಸ್ಪತ್ರೆಗಳಿಗೆ ಬಳಕೆ ಮಾಡಿದರು. ಖಾಸಗಿ ಆಸ್ಪತ್ರೆಗಳು ಲಕ್ಷ ಲಕ್ಷ ರೂ. ಬಿಲ್ ಮಾಡಿ ಸುಲಿಗೆ ಮಾಡಿದವು. ಇಂತಹ ಸಂದರ್ಭದಲ್ಲಿ ಸರ್ಕಾರ ಎಷ್ಟು ದೊಡ್ಡ ಕೆಲಸ ಮಾಡಿತು. ಇದೆಲ್ಲ ಕಾಂಗ್ರೆಸ್ ನಾಯಕರ ಕಣ್ಣಿಗೆ ಕಾಣದೆ ವಿನಾಕಾರಣ ಬೆಲೆ ಏರಿಕೆ ಬಗ್ಗೆ ಮಾತನಾಡುತ್ತಿರುವುದು ಆಶ್ಚರ್ಯವಾಗುತ್ತದೆ ಎಂದ ಅವರು, ರಾಹುಲ್ ಗಾಂಧಿ ಬಿಡಿ ಲೆಕ್ಕಕ್ಕಿಲ್ಲ. ಇವರು (ಸಿದ್ದರಾಮಯ್ಯ) ಮುಖ್ಯಮಂತ್ರಿ ಆಗಿದ್ದವರು. 14 ಸಲ ಬಜೆಟ್ ಮಂಡಿಸಿದವರು. ಇವರಿಗೆ ಇದೆಲ್ಲ ಕಣ್ಣಿಗೆ ಕಾಣಲ್ಲ ಅಂದ್ರೆ ಆಶ್ಚರ್ಯವಾಗುತ್ತದೆ ಎಂದು ಹರಿಹಾಯ್ದರು.

Community-verified icon
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net