ಅಸಲಿ ಪ್ರಜಾಪ್ರಭುತ್ವ ಉಳಿಯಲಿ

BDM NEWS 24-1
Published on

ಬಾದಾಮಿ: ಕಲೆ, ಸಾಹಿತ್ಯಕ್ಕೆ ಹೆಸರುವಾಶಿಯಾದ ಐತಿಹಾಸಿಕ ಬಾದಾಮಿ ನಗರದಲ್ಲಿ ವಿಶ್ವಚೇತನ ಸಂಸ್ಥೆ 25 ವರ್ಷಗಳ ಕಾಲ ಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಮಾಜಿ ವಿಧಾನ ಸಭಾಧ್ಯಕ್ಷ ಹಾಗೂ ಶ್ರೀನಿವಾಸಪುರ ಶಾಸಕ ಕೆ.ಆರ್.ರಮೇಶಕುಮಾರ ಹೇಳಿದರು.

ಇಲ್ಲಿನ ಅಕ್ಕಮಹಾದೇವಿ ಅನುಭಾವ ಮಂಟಪದ ಆವರಣದಲ್ಲಿ ಭಾನುವಾರ ‘ಚುನಾವಣೆ ರಾಜಕಾರಣ, ಪ್ರಜಾಪ್ರಭುತ್ವ ಮತ್ತು ಮಾನವೀಯತೆ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ಮಾನವೀಯತೆ ಗೌರವಿಸುವ ದೃಷ್ಟಿಯಿಂದ ಪ್ರಜಾಪ್ರಭುತ್ವ ಒಂದು ವ್ಯವಸ್ಥೆಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ದಾರಿಯಲ್ಲಿ ರಾಜಕಾರಣ ಇರಬೇಕು. ಆದರೆ, ಈಗ ರಾಜಕಾರಣ ಮೊದಲಾಗಿದ್ದು, ಪ್ರಜಾಪ್ರಭುತ್ವ ಎರಡನೇ ಸ್ಥಾನದಲ್ಲಿ, ಮಾನವೀಯತೆ ಕೊನೆಯ ಸ್ಥಾನದಲ್ಲಿದೆ ಎಂದರು.

ಶಿಕ್ಷಣ, ವೈದ್ಯಕೀಯ, ಆರೋಗ್ಯ ಖಾಸಗಿಕರಣವಾಗಿದೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಶಾಸಕ, ಸಂಸದರು ಶೈಕ್ಷಣಿಕ ಸಂಸ್ಥೆಗಳನ್ನು, ಆಸ್ಪತ್ರೆಗಳನ್ನು ಹೊಂದಿದ್ದಾರೆ. ರಾಜಕಾರಣಿಗಳು ಎಲ್ಲರೂ ಒಂದೇ. ಆದರೆ, ನೀವು ಮಾತ್ರ ಅವರು ನಮ್ಮ ನಾಯಕ, ಇದು ನಮ್ಮ ಪಕ್ಷ ಎಂದು ಹೊಡೆದಾಡಿಕೊಳ್ಳುತ್ತಿರಿ. ಆದ್ದರಿಂದ ನೆಪ ಮಾತ್ರದ ಪ್ರಜಾಪ್ರಭುತ್ವ ಹೋಗಬೇಕು. ಅಸಲಿ ಪ್ರಜಾಪ್ರಭುತ್ವ ಉಳಿಯಬೇಕು ಎಂದರು.

ಚುನಾವಣೆ ವ್ಯವಸ್ಥೆ ಸುಧಾರಣೆ ಆಗಬೇಕು ಎನ್ನುವುದು ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಆಸೆಯಾಗಿತ್ತು. ಚುನಾವಣೆ ಈಗ ದುಡ್ಡಿನ ಮೇಲೆ ನಿಂತಿದೆ. ಹಣವಿದ್ದವರು ಚುನಾವಣೆಗೆ ನಿಂತು ಗೆಲ್ಲುತ್ತಾರೆ. ನಂತರ ಕೋಟಿ ಕೋಟಿ ಆಸ್ತಿ ಮಾಡಿಕೊಳ್ಳುತ್ತಾರೆ. ಈ ಬಗ್ಗೆ ಚುನಾವಣೆ ಆಯೋಗ ಮಾತ್ರ ಏನು ಕ್ರಮ ತೆಗೆದುಕೊಳ್ಳುವುದಿಲ್ಲ. ಚುನಾವಣೆ ಮುಗಿದ ನಂತರ ಆಯೋಗ ನಿದ್ದೆ ಮಾಡುತ್ತದೆ. ಹೀಗಾಗಿ ರಾಜಕೀಯ ಬಂಡವಾಳ ಹಾಕಿ ವಾಪಾಸ್ ಪಡೆಯುವ ಉದ್ಯಮವಾಗಿದೆ. ಈ ರಾಜಕೀಯ ವ್ಯವಸ್ಥೆ ಮೊದಲು ಬದಲಾಗಬೇಕಿದೆ. ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಸತ್ತು ಹೋಗಿದೆ. ಚುನಾವಣೆ ವ್ಯವಸ್ಥೆ ಭ್ರಷ್ಟಗೊಂಡಿದೆ ಎಂದು ರಮೇಶಕುಮಾರ ಹೇಳಿದರು.

ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ, ಹೊಳೆಬಸು ಶೆಟ್ಟರ, ಎಂ.ಡಿ. ಯಲಿಗಾರ, ಐ.ಕೆ. ಪಟ್ಟಣಶೆಟ್ಟಿ, ಪಂಪಣ್ಣ ಕಾಚಟ್ಟಿ, ಜೆ.ಎಸ್. ಮಮದಾಪುರ, ವಿ.ಎಸ್. ಕಟಗಿಹಳ್ಳಿಮಠ, ಶೀಲಾಕಾಂತ ಪತ್ತಾರ, ಎಚ್.ಎ್. ಯೋಗಪ್ಪನವರ, ಕಾರ್ಯದರ್ಶಿ ಇಷ್ಟಲಿಂಗ ಶಿರಸಿ, ಬಿ.ವಿ. ಭಂಡಾರಿ ಇನ್ನಿತರರು ಇದ್ದರು. ಶಿಕ್ಷಕ ಉಜ್ವಲ ಬಸರಿ ನಿರೂಪಿಸಿ, ವಂದಿಸಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net