ಬ್ಯಾಡಗಿ ತಾಲೂಕು ಬರಪೀಡಿತ ಪ್ರದೇಶ ಘೊಷಿಸಿ

BARA
Published on

ಬ್ಯಾಡಗಿ: ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆಯಿಂದ ಬಿತ್ತಿದ ಬೆಳೆ ಬಾರದೆ ರೈತರು ಸಂಕಷ್ಟದಲ್ಲಿ ಸಿಲುಕಿ ಆತಂಕ ಎದುರಿಸುತ್ತಿದ್ದಾರೆ. ಸರ್ಕಾರ ಕೂಡಲೇ ಬ್ಯಾಡಗಿ ತಾಲೂಕನ್ನು ಬರಗಾಲ ಪಟ್ಟಿಯಲ್ಲಿ ಸೇರ್ಪಡೆಗೊಳಿಸಬೇಕು ಎಂದು ತಾಲೂಕಿನ ಹೊಸಶಿಡೇನೂರು ತಾಂಡಾದ ರೈತ ಮಹಿಳೆಯರು ಭಾನುವಾರ ಸರ್ಕಾರಕ್ಕೆ ಆಗ್ರಹಿಸಿದರು.

ಗ್ರಾಮಸ್ಥೆ ಶಾಂತವ್ವ ಲಮಾಣಿ ಮಾತನಾಡಿ, ಎರಡು ವರ್ಷಗಳಿಂದ ರೈತರು ಒಂದಿಲ್ಲೊಂದು ಸಂಕಟದಲ್ಲಿ ಸಿಲುಕಿದ್ದು, ಅತಿವೃಷ್ಟಿ, ಅನಾವೃಷ್ಟಿ ಎದುರಿಸುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಕೈಕೊಟ್ಟು, ಬಳಿಕ ಸತತ ಮಳೆ ಸುರಿದು, ಆಗಸ್ಟ್ ತಿಂಗಳಲ್ಲಿ ಸಂಪೂರ್ಣ ಮಳೆ ಕೈಕೊಟ್ಟ ಪರಿಣಾಮ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಗಳೆಲ್ಲ ಹಾಳಾಗಿದೆ. ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದು, ಜೀವನ ನಿರ್ವಹಣೆ ಕಷ್ಟಕರವಾಗಿದೆ. ಜಾನುವಾರುಗಳಿಗೆ ಮೇವು, ನೀರಿನ ಕೊರತೆ ಎದುರಾಗುವ ಸಂಭವವಿದ್ದು, ತುರ್ತು ಪರಿಹಾರಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಜಿಲ್ಲೆಯ ಬೇರೆ ಬೇರೆ ತಾಲೂಕುಗಳನ್ನು ಬರಗಾಲ ಪಟ್ಟಿಗೆ ಸೇರಿಸಿ, ಬ್ಯಾಡಗಿ ಕೈಬಿಟ್ಟಿರುವುದರಿಂದ ರೈತರು ಬೇಸರಗೊಂಡಿದ್ದಾರೆ. ತಕ್ಷಣ ತಾಲೂಕನ್ನು ಬರಗಾಲವೆಂದು ಘೊಷಿಸಿ, ಪರಿಹಾರ ಕಾರ್ಯ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಸರ್ಕಾರಕ್ಕೆ ಮಳೆ ಕೊರತೆ, ರೈತರ ನೈಜತೆ ಕುರಿತು ವರದಿ ಕಳುಹಿಸಿದೆ. ಆದರೆ, ರಾಜ್ಯಮಟ್ಟದ ಅಧಿಕಾರಿಗಳು ಬ್ಯಾಡಗಿಗೆ ನ್ಯಾಯ ಒದಗಿಸುವಲ್ಲಿ ಮೀನಮೇಷ ಎಣಿಸುತ್ತಿದ್ದಾರೆ. ಬೆಳೆ ವಿಮೆ ತುಂಬಿದ ರೈತರಿಗೆ ಮಧ್ಯಂತರ ಪರಿಹಾರ ಕೊಡಬೇಕೆಂಬ ನಿಯಮವನ್ನು ವಿಮಾ ಅಧಿಕಾರಿಗಳು ಪಾಲಿಸುತ್ತಿಲ್ಲ. ಜಿಲ್ಲಾಧಿಕಾರಿ ತಕ್ಷಣ ಸೂಚನೆ ನೀಡುವ ಮೂಲಕ ರೈತಪರ ಕಾಳಜಿ ವಹಿಸಬೇಕು. ತಾಲೂಕಿನ ರೈತರಿಗೆ ನ್ಯಾಯ ಸಿಗದಿರುವುದು ಬೇಸರವಾಗಿದ್ದು, ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಆಗ್ರಹಿಸಿದರು.

ಕುಸುಮವ್ವ ಲಮಾಣಿ, ಕಮಲವ್ವ ಲಮಾಣಿ, ರಾಮವ್ವ ನಾಯಕ, ಶಾರದವ್ವ ಲಮಾಣಿ, ಅನಿತಾ ಲಮಾಣಿ, ಸುಶೀಲಾ ಲಮಾಣಿ, ಗೀತವ್ವ ಲಮಾಣಿ, ಗಿರಿಜವ್ವ ಲಮಾಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net