ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗಿಲ್ಲ ಭದ್ರತೆ: ಭರವಸೆಯಾಗಿಯೇ ಉಳಿದ ಪೊಲೀಸ್ ಚೌಕಿ

Byadagi Chilly Market
Published on

ವಿಜಯವಾಣಿ ವಿಶೇಷ ಬ್ಯಾಡಗಿ

ಮಾ. 11 ಬ್ಯಾಡಗಿ ಎಪಿಎಂಸಿ ಮೆಣಸಿನಕಾಯಿ ಮಾರುಕಟ್ಟೆಗೆ ಒಂದು ಕಪ್ಪು ಚುಕ್ಕೆ. ಮೆಣಸಿನಕಾಯಿ ದರ ಕುಸಿದಿದೆ ಎಂದು ಕೆಲ ಕಿಡಿಗೇಡಿಗಳು ಎಪಿಎಂಸಿ ಆಡಳಿತ ಕಚೇರಿ, ಪೀಠೋಪಕರಣ ಸೇರಿದಂತೆ ವಾಹನ, ಕಟ್ಟಡಗಳಿಗೆ ಬೆಂಕಿ ಹಚ್ಚಿದ್ದರು. ಇದರಿಂದ 2 ಕೋಟಿ ರೂಪಾಯಿಗೂ ಹೆಚ್ಚು ಹಾನಿ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಹೆಚ್ಚಿನ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಪೊಲೀಸ್ ಚೌಕಿ ನಿರ್ವಿುಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದರು. ಆದರೆ, ಒಂದು ವರ್ಷವಾದರೂ ಬೇಡಿಕೆ ಮಾತ್ರ ಇನ್ನೂ ಈಡೇರಿಲ್ಲ!

2024 ಮಾರ್ಚ್ 11ರಂದು ರೈತರು ಮೆಣಸಿನಕಾಯಿ ಬೆಲೆ ಕುಸಿದಿದೆ ಎಂದು ದಿಢೀರನೆ ಆಡಳಿತ ಕಚೇರಿಗೆ ನುಗ್ಗಿ ಪೀಠೋಪಕರಣ ಸೇರಿದಂತೆ ಕಟ್ಟಡಕ್ಕೆ ಬೆಂಕಿ ಹಚ್ಚಿ ಮೂಲ ದಾಖಲೆಗಳನ್ನು ಸುಟ್ಟುಹಾಕಿದ್ದರು. ಆರೇಳು ವಾಹನಗಳು ಧ್ವಂಸವಾದವು. ಬೆಂಕಿ ನಂದಿಸಲು ಆಗಮಿಸಿದ್ದ ಅಗ್ನಿಶಾಮಕ ವಾಹನ ಬೆಂಕಿಗೆ ಅಹುತಿಯಾಯಿತು. ರೈತರ ಆಕ್ರೋಶಕ್ಕೆ ಪೊಲೀಸ್ ಸಿಬ್ಬಂದಿ ಹಾಗೂ ಮಾಧ್ಯಮದವರೂ ಗಾಯಗೊಂಡರು. ನಂತರ ಕೆಲ ರೈತರ ಬಂಧನವಾಯಿತು. ಈ ಘಟನೆ ಮಾರುಕಟ್ಟೆ ಇತಿಹಾಸದಲ್ಲಿ ಕರಾಳ ದಿನವಾಗಿ ಉಳಿಯಿತು. ಆದರೆ, ಘಟನೆ ನಡೆದು ವರ್ಷ ಗತಿಸಿದರೂ ಎಪಿಎಂಸಿಯಲ್ಲಿ ವ್ಯವಸ್ಥೆ ಸುಧಾರಣೆ ಕಂಡಿಲ್ಲವೆಂಬ ಆರೋಪ ಎಲ್ಲೆಡೆ ಕೇಳಿ ಬರುತ್ತಿದೆ.

ಪೊಲೀಸ್ ಚೌಕಿ ಆರಂಭವಾಗಿಲ್ಲ:

ಸೋಮವಾರ ಹಾಗೂ ಗುರುವಾರ ಮೆಣಸಿನಕಾಯಿ ಮಾರಾಟಕ್ಕೆ ಬ್ಯಾಡಗಿಗೆ ಹತ್ತಾರು ಸಾವಿರ ಜನ ಆಗಮಿಸುತ್ತಾರೆ. ಬೆಲೆ ಇಳಿಮುಖ ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ಕೆಲವೊಮ್ಮೆ ರೈತರು ದಿಢೀರನೆ ಪ್ರತಿಭಟನೆ ಹಾಗೂ ಆಕ್ರೋಶಕ್ಕೆ ಮುಂದಾಗುತ್ತಾರೆ. ಆಗ ದುರ್ಘಟನೆ ತಪ್ಪಿಸಲು ಕಾಯಂ ಪೊಲೀಸ್ ಸಿಬ್ಬಂದಿ ನೇಮಕ ಅಗತ್ಯವಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಸೇರಿದಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮೂಲಕ ಒತ್ತಾಯಿಸಲಾಗಿದೆ. ಆದರೆ, ಈವರೆಗೂ ಸರ್ಕಾರ ಯಾವುದೇ ಕ್ರಮ ಜರುಗಿಸಿಲ್ಲ ಎಂದು ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದಾರೆ.

ಟ್ರಾಫಿಕ್ ನಿಯಂತ್ರಣಕ್ಕೆ ಸಿಬ್ಬಂದಿ ಕೊರತೆ:

ಪೊಲೀಸ್ ಅಧಿಕಾರಿಗಳಿಗೆ ಪ್ರತಿ ಸೋಮವಾರ ಹಾಗೂ ಗುರುವಾರ ಟ್ರಾಫಿಕ್ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇನ್ನೂತನಕ ಸಿಬ್ಬಂದಿ ನೇಮಕವಾಗಿಲ್ಲ. ಎಪಿಎಂಸಿ ಗೇಟ್ ಬಳಿ ಹಾಗೂ ಹಳೇ ಪುರಸಭೆ, ಸುಭಾಸ ಸರ್ಕಲ್, ಎಸ್ಸೆನ್ ಫಾಮ್ರ್ ಬಳಿ ಟ್ರಾಫಿಕ್ ಸಿಬ್ಬಂದಿ ತೀವ್ರ ಅಗತ್ಯವಿದೆ.

ಆಡಳಿತ ಕಚೇರಿಯಲ್ಲಿ ಸಿಬ್ಬಂದಿ ಖಾಲಿ:

ಎಪಿಎಂಸಿಯಲ್ಲಿ ಮಂಜೂರಾದ ಒಟ್ಟು 26 ಹುದ್ದೆಗಳ ಪೈಕಿ ಕೇವಲ 6 ಜನ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ರೈತರಿಗೆ ಹಾಗೂ ವರ್ತಕರಿಗೆ ಸಿಬ್ಬಂದಿ ಕೊರತೆಯಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಒಂದು ವರ್ಷದಿಂದ ಎಪಿಎಂಸಿ ಕಾರ್ಯದರ್ಶಿ ಕೂಡ ನಿಯೋಜಿತ ಸ್ಥಾನದಲ್ಲಿದ್ದು, ಶೇ. 75ರಷ್ಟು ಹುದ್ದೆಗಳು ಖಾಲಿ ಉಳಿದಿವೆ. ಪರಿಣಾಮ ಆಡಳಿತ ವ್ಯವಸ್ಥೆಗೂ ತೀವ್ರ ತೊಂದರೆ ಉಂಟಾಗಿದೆ.

ಎಪಿಎಂಸಿ ಆಡಳಿತ ಕಚೇರಿಯಲ್ಲಿ ಸಿಬ್ಬಂದಿ ಸಮಸ್ಯೆಯಿದ್ದು, ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಈಚೆಗೆ ಸರ್ಕಾರದ ಕಾರ್ಯದರ್ಶಿಗಳಿಗೆ ತಿಳಿಸಿದ್ದೇವೆ. ಶೌಚಗೃಹ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಸೂತ್ರ ಸಿದ್ಧವಾಗಿದೆ. ಪೊಲೀಸ್ ಚೌಕಿ ಆರಂಭಿಸಲು ಮತ್ತೊಂದು ಬಾರಿ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆಯುತ್ತೇನೆ. | ಡಾ.ಆದರ್ಶ ಬಿ.ಡಿ., ನಿಯೋಜಿತ ಕಾರ್ಯದರ್ಶಿ ಎಪಿಎಂಸಿ ಬ್ಯಾಡಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net