ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಸಚಿವರ ದಿಢೀರ್ ಭೇಟಿ

Minister Shivanand Patil visit to byadagi chilly market
Published on

ಬ್ಯಾಡಗಿ: ಇಲ್ಲಿನ ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಸೇರಿದಂತೆ ವಿವಿಧ ಅಧಿಕಾರಿಗಳ ತಂಡ ಸೋಮವಾರ ದಿಢೀರ್ ಭೇಟಿ ನೀಡಿ, ಮಾರುಕಟ್ಟೆ ವ್ಯವಸ್ಥೆ ಪರಿಶೀಲಿಸಿದರು.

ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವಾಹನ ನಿಲುಗಡೆ ಕಟ್ಟಡವನ್ನು ಸಚಿವರು ವೀಕ್ಷಿಸಿದರು. ಕಟ್ಟಡದ ಪೂರ್ಣಗೊಳಿಸುವ ಅವಧಿ ಸೇರಿದಂತೆ ಹಲವು ಮಾಹಿತಿ ಪಡೆದರು. ಎಪಿಎಂಸಿ ಕಚೇರಿ ಪಕ್ಕದಲ್ಲಿ ಗೋದಾಮು ನೆಲಸಮಗೊಳಿಸಿ, ಮಾರುಕಟ್ಟೆಗೆ ನೀಡಲಾಗುತ್ತಿದೆ. ಕೂಡಲೇ ಆ ಜಾಗ ಸ್ವಚ್ಛಗೊಳಿಸುವಂತೆ ಸೂಚಿಸಿದರು.

ಸೋಮವಾರ 2 ಲಕ್ಷ ಚೀಲ ಆವಕದಿಂದ ಮಾರುಕಟ್ಟೆ ಸಂಪೂರ್ಣವಾಗಿ ತುಂಬಿ ತುಳುಕುತ್ತಿತ್ತು. ಎಲ್ಲಿ ನೋಡಿದರೂ ಮೆಣಸಿನಕಾಯಿ ಘಾಟು ಇತ್ತು. ಆದರೂ, ಸಚಿವರು ಟೆಂಡರ್ ನಡೆಯುವ ಪ್ರಾಂಗಣಕ್ಕೆ ತೆರಳಿ ಮಾರಾಟಕ್ಕೆ ಬಂದಿದ್ದ ರಾಯಚೂರು, ಬಳ್ಳಾರಿ, ಕುಂದಗೋಳ ಭಾಗದ ರೈತರೊಂದಿಗೆ ಮಾತನಾಡಿ ಬೆಲೆ ಹಾಗೂ ಬೆಳೆಯ ಮಾಹಿತಿ ಪಡೆದರು.

ಮೆಣಸಿನಕಾಯಿ ಬೆಲೆ ಪ್ರಸಕ್ತ ವರ್ಷದಲ್ಲಿ ಕುಸಿದಿದ್ದು, ಇದರಿಂದ ವರ್ತಕರು ಹಾಗೂ ರೈತರಿಗೆ ತುಂಬಾ ಸಮಸ್ಯೆಯಾಗಿದೆ. ಬೆಲೆ ಕುಸಿತಕ್ಕೆ ಮೂಲ ಕಾರಣ, ಹಿಂದಿನ ವರ್ಷದ ಮಾರಾಟ ಪಟ್ಟಿ ಇತ್ಯಾದಿಗಳನ್ನು ಸರ್ಕಾರಕ್ಕೆ ಸಲ್ಲಿಸಿ, ಸೂಕ್ತ ಪರಿಹಾರ ಕಂಡುಹಿಡಿಯಬೇಕಿದೆ. ಸ್ಥಳೀಯ ಅಧಿಕಾರಿಗಳು ಮೆಣಸಿನಕಾಯಿ ಸ್ಯಾಂಪಲ್ ಸಂಗ್ರಹಿಸಿ ಕಳುಹಿಸಬೇಕು ಎಂದು ಸೂಚಿಸಿದರು.

ಮೂಲಸೌಲಭ್ಯ ಕಲ್ಪಿಸಲು ಸೂಚನೆ

ಮಾರುಕಟ್ಟೆ ವೀಕ್ಷಣೆ ಬಳಿಕ ಸಚಿವ ಶಿವಾನಂದ ಪಾಟೀಲ ಮಾತನಾಡಿ, ದೇಶದಲ್ಲಿ ಪ್ರಸಿದ್ಧ ಮೆಣಸಿನಕಾಯಿ ಮಾರುಕಟ್ಟೆಯ ಖ್ಯಾತಿ ಬ್ಯಾಡಗಿ ಉಳಿಸಿಕೊಂಡಿದ್ದು, ಹಾವೇರಿ ಜಿಲ್ಲೆಗೆ ಹೆಮ್ಮೆಯಾಗಿದೆ. ಸ್ಥಳೀಯ ವರ್ತಕರ ಹಾಗೂ ರೈತರ ಸಹಕಾರದಿಂದ ಎಲ್ಲವೂ ನಡೆದಿದೆ. ಸರ್ಕಾರದಿಂದ ಮಾರುಕಟ್ಟೆ ಬೆಳವಣಿಗೆಗೆ ಸಾಕಷ್ಟು ಅನುದಾನ ಒದಗಿಸಲಾಗಿದೆ. ಪ್ರಸಕ್ತ ವರ್ಷ ಹೊಸದಾಗಿ 2 ಕೋಲ್ಡ್ ಸ್ಟೋರೇಜ್ ನಿರ್ಮಿಸಲು ಅನುದಾನ ನೀಡಲಾಗುವುದು. ರೈತರಿಗೆ ಯಾವುದೇ ತೊಂದರೆಯಾಗದಂತೆ ಎಪಿಎಂಸಿ ಅಧಿಕಾರಿಗಳು ಕಾಳಜಿ ವಹಿಸಬೇಕು. ಸಮರ್ಪಕವಾಗಿ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಎಸ್‌ಪಿ ಅಂಶುಕುಮಾರ, ಆಡಳಿತಾಧಿಕಾರಿ ಎಸ್.ಬಿ. ನ್ಯಾಮಗೌಡ್ರ, ತಹಸೀಲ್ದಾರ್ ಪಿರೋಜ್‌ಷಾ ಸೋಮನಕಟ್ಟಿ, ಎಪಿಎಂಸಿ ಕಾರ್ಯದರ್ಶಿ ಡಾ.ಡಿ.ಬಿ. ಆದರ್ಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net