

ಅಣ್ಣೀರ ಹರೀಶ್ ಮಾದಪ್ಪ ಶ್ರೀಮಂಗಲ
ದಕ್ಷಿಣ ಭಾರತದ ಏಕೈಕ ಮೃತ್ಯುಂಜಯ ದೇವಸ್ಥಾನ ಎಂದು ಪ್ರಸಿದ್ಧಿ ಪಡೆದಿರುವ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕು ಬಾಡಗರಕೇರಿಯ ಶ್ರೀ ಮೃತ್ಯುಂಜಯ ದೇವಸ್ಥಾನ ಸಾವಿರ ವರ್ಷದ ಇತಿಹಾಸ ಹೊಂದಿದೆ. ಈ ದೇವಸ್ಥಾನದಲ್ಲಿ ಸಂಕಲ್ಪ ತೊಟ್ಟುಕೊಂಡರೆ ಮೃತ್ಯು ಕಂಟಕದಿಂದ ಜಯಿಸಬಹುದೆಂದು ಪ್ರತೀತಿ ಇದೆ. ಪ್ರತಿನಿತ್ಯ ನೂರಾರು ಭಕ್ತಾದಿಗಳು ಕ್ಷೇತ್ರಕ್ಕೆ ಭಕ್ತಿಭಾವದಿಂದ ಸೇವೆ ಸಲ್ಲಿಸಲು ಬರುತ್ತಾರೆ.
ಸಾವಿರ ವರ್ಷಗಳ ಹಿಂದೆ ನಾಡಿನಲ್ಲಿ ಸ್ಥಾಪನೆಯಾದ ಭಕ್ತಿಭಾವದ ಸ್ಥಳ ಶ್ರೀ ಮೃತ್ಯುಂಜಯ ದೇವಸ್ಥಾನ. ಇದಕ್ಕೆ ನೂರಾರು ವರ್ಷದ ಹಿನ್ನೆಲೆ ಇರಬೇಕೆಂದರೆ ದೇವರ ಮಹಿಮೆಯು ಅಷ್ಟೇ ಪ್ರಬಲವಾಗಿದೆ. ನಾಡಿನ ಜನರನ್ನು ಕಷ್ಟಗಳಿಂದ ಪಾರುಮಾಡಿ, ಮೃತ್ಯವಿನಿಂದ ಕಾಪಾಡಿ ಸುಖದಲ್ಲಿ ಮುನ್ನಡೆಸಿದೆ. ಬಯಸಿದವರಿಗೆ ಭಾಗ್ಯ ಕೊಟ್ಟಿದೆ ಎಂಬ ನಂಬಿಕೆ ಭಕ್ತಾದಿಗಳಲ್ಲಿದೆ.
ಆದ್ದರಿಂದಲೇ ಪೂರ್ವಜರು ದೇವಸ್ಥಾನ ಕಟ್ಟಿ, ಅದರ ಜೀರ್ಣೋದ್ಧಾರ ಮಾಡುತ್ತಾ ಏಳಿಗೆಗೆ ಶ್ರಮಿಸಿದ್ದಾರೆ. ದೇವಸ್ಥಾನದ ಹಿನ್ನೆಲೆ ಹಾಗೂ ಸ್ಥಾಪನೆ ಬಗ್ಗೆ ಹಲವಾರು ಕಥೆಗಳು ಇವೆ. ರಾಜರ ಕಾಲದಲ್ಲಿ ಈ ದೇವಸ್ಥಾನ ನಿರ್ಮಿಸಲಾಯಿತು ಎಂದು ಹೇಳಲಾಗುತ್ತಿದೆ. ಸಾವಿರ ವರ್ಷಗಳ ಹಿಂದೆ ಕೊಡಗಿನಲ್ಲಿ ಉತ್ತರ ಭಾಗವನ್ನು ಪಾಳೆಗಾರರು, ಪೂರ್ವ ಭಾಗವನ್ನು ನಾಯಕರು ಆಳುತ್ತಿದ್ದರು. ದಕ್ಷಿಣ ಕೊಡಗಿನ ಪಶ್ಚಿಮ ಭಾಗದಲ್ಲಿ ಕೆಲವೆಡೆ ಬೆಟ್ಟಗುಡ್ಡದ ಬದಿಯನ್ನು ಚೆರಕಲ್ ರಾಜ ಆಳುತ್ತಿದ್ದರು. ಅವರು ಈ ನಾಡನ್ನು ಮರೆನಾಟ್ (ಮರೆ ನಾಡ್) ಎಂದು ಕರೆಯುತ್ತಿದ್ದರು.
ಕ್ರಮೇಣ ವರ್ಷಗಳು ಉರುಳಿದಂತೆ ಪಾಳೆಗಾರರ ಆಳ್ವಿಕೆಯಲ್ಲಿ ಮರೆನಾಡ್ ಎಂಬುದು ಎಲ್ಲ ಗ್ರಾಮಗಳನ್ನು ಸೇರಿಸಿ ಮರೆನಾಡು ಎಂದು ಕರೆಯುವುದು ರೂಢಿ ಆಯ್ತೆಂದು ಹೇಳುತ್ತಾರೆ. ಮರೆನಾಡಿನೊಳಗೆ ಬಾಡಗರಕೇರಿ ಉಪನಾಡು ಆಗಿತೆಂದು ಹೇಳಲಾಗುತ್ತದೆ. ಇಲ್ಲಿ ಕೊಡವ ಜನಾಂಗದವರಿಗಿಂತ ಅಮ್ಮ ಕೊಡವ ಜನಾಂಗದ ಕುಟುಂಬಗಳು ಹೆಚ್ಚಾಗಿ ಇದ್ದವು. ರಾಜರ ಆಜ್ಞೆಯಂತೆ ತೆಕ್ಕಡಮ್ಮನ ಅಚ್ಚಮ್ಮ ಎಂಬವರು ಊರಿನ ಕಂದಾಯ ವಸೂಲಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಚರಕಲ್ ರಾಜರಿಗೆ ಈ ಊರಿನ ಕಪ್ಪ ಕಾಣಿಕೆಗಳು ತಲುಪುತ್ತಿದ್ದವು. ಆ ಕಡೆ ಬಾಡಗರಕೇರಿಗೆ ಅಗತ್ಯ ದಿನ ಬಳಕೆಯ ವಸ್ತುಗಳನ್ನು ಕೋಟೆಕುಟ್ಟಂಡ ಮುದ್ದ ಎಂಬವರು ತಂದು ವ್ಯಾಪಾರ ಮಾಡುತ್ತಿದ್ದರು. ಹೀಗೆ ನಾಡಿಗೆ ಕೇರಳದ ಬಾಂಧವ್ಯವು ಉತ್ತಮವಾಗಿ ಸಾಗುತ್ತಿತ್ತು. ಚೆರಕಲ್ ರಾಜನಿಗೆ ಕೊಡಗಿನವರ ದಕ್ಷತೆ, ಕಾರ್ಯ ನೈಪುಣ್ಯತೆ ಬಗ್ಗೆ ಉತ್ತಮ ನಂಬಿಕೆಯು ಇತ್ತು.
ಹೀಗಿರುವಾಗ ಒಮ್ಮೆ ಚರಕಲ ರಾಜನಿಗೆ ಸಾಂಸಾರಿಕ ತೊಂದರೆಯೊಂದು ಕಾಣಿಸಿಕೊಂಡಿತು. ಅಂದರೆ ರಾಜನಿಗೆ ಜನಿಸಿದ ಮಕ್ಕಳು ಒಡನೆ ಮತಪಟ್ಟು ಮನಶಾಂತಿ ಕಡಿಮೆಯಾಗಿತ್ತು. ಇದಕ್ಕಾಗಿ ಕೇರಳದ ತನ್ನ ಕೋಟೆಯಲ್ಲಿ ಶ್ರೀ ಮೃತ್ಯುಂಜಯನ ಪ್ರಾರ್ಥನೆ ಸದಾ ಪೂಜೆ ಮಾಡುತ್ತಿದ್ದನು. ಹೀಗಿರುವಾಗ ಇಬ್ಬರೂ ಗಂಡು ಮಕ್ಕಳು ಜನಿಸಿ ಉಳಿದರು. ಕೆಲಕಾಲ ಕಳೆದ ನಂತರ ವಿರೋಧಿಗಳು ಚೆರಕಲ್ ಸಾಮ್ರಾಜ್ಯದ ಮೇಲೆ ದಾಳಿ ಮಾಡುತ್ತಾರೆ ಮತ್ತು ರಾಜನ ಇಬ್ಬರು ಪುತ್ರರನ್ನು ಕೊಲ್ಲುತ್ತಾರೆಂದು ಸೂಚನೆ ದೊರೆಯಿತು. ಈ ವಿಷಯ ವನ್ನು ಕೋಟೆಕುಟ್ಟಂಡ ಮುದ್ದನಿಗೆ ತಿಳಿಸಿ ಕೊಡಗಿನಲ್ಲಿ ಅಡಗಿಸಿಡಲು ಅವಕಾಶ ಮಾಡುವಂತೆ ಕೋರಿದನು.
ಅದರಂತೆ ರಾಜನ ಪುತ್ರರಿಗೆ ಆಶ್ರಯ ಕೊಡಲು ಬಯಸಿದರೂ, ಭಯಪಟ್ಟು ನಂತರ ಮಕ್ಕಳನ್ನು ಕೊಡವರ ಮನೆ ಒಂದರಲ್ಲಿ ಇರುವಂತೆ ವ್ಯವಸ್ಥೆ ಮಾಡಿದನು. ಕಣ್ಣೂರು ರಾಜನಿಂದ ಚೆರಕಲ್ ರಾಜನ ಮೇಲೆ ಯುದ್ಧ ಪ್ರಾರಂಭವಾಯಿತು. ಚೆರಕಲ್ ರಾಜ ತನ್ನ ಇಷ್ಟ ದೇವತೆಯಾದ ಮೃತ್ಯುಂಜಯನನ್ನು ನೆನೆದು ಯುದ್ಧ ಮಾಡಿದ್ದು, ವಿಜಯಶಾಲಿಯಾದ ನಂತರ ದೇವರ ಕೃಪೆ ನೆನೆದು ಬಾಡಗರಕೆರೆಯಲ್ಲಿ ದೇವಸ್ಥಾನ ನಿರ್ಮಿಸಿದ ಎಂಬುದು ಇತಿಹಾಸ.
ವಾರ್ಷಿಕ ಉತ್ಸವ
ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ವಾರ್ಷಿಕ ಉತ್ಸವ ನಡೆಯತ್ತದೆ. ೧೦ ದಿನ ಉತ್ಸವದ ಕಟ್ಟು ಇರುತ್ತದೆ. ೧೦ ದಿನಕಾಲ ಪ್ರತಿದಿನ ವಿಶೇಷ ಪೂಜೆ, ಧಾರ್ಮಿಕ ಕೈಂಕರ್ಯ ನಡೆಯುತ್ತದೆ. ವರ್ಷದ ಪ್ರತಿದಿನ ಕ್ಷೇತ್ರದಲ್ಲಿ ನಿತ್ಯಪೂಜೆ ಮತ್ತು ಭಕ್ತಾದಿಗಳಿಗೆ ಸಾಮೂಹಿಕ ಮಧ್ಯಾಹ್ನ ಮಾತ್ರ ಅನ್ನಸಂತರ್ಪಣೆ ಇರುತ್ತದೆ.
ದೇವಸ್ಥಾನ ಆಚರಣೆ ಮತ್ತು ನಿರ್ವಹಣೆ ತಕ್ಕ ಮುಖ್ಯಸ್ಥರು ಮುಂದಾಳತ್ವದಲ್ಲಿ ದೇವಸ್ಥಾನ ಆಡಳಿತ ಮಂಡಳಿ ನಿರ್ವಹಿಸುತ್ತದೆ. ದೇವಸ್ಥಾನಕ್ಕೆ ಪೊರಾಡು ಮತ್ತು ಬಾಡಗರಕೇರಿ ಗ್ರಾಮಸ್ಥರ ತೆರಿಗೆ ಮತ್ತು ದೇವಸ್ಥಾನದ ಪೂಜೆ ವರಮಾನದ ಮೂಲಕ ನಿರ್ವಹಿಸಲಾಗು ತ್ತದೆ.
ದೇವಸ್ಥಾನ ೪ ಎಕ್ರೆ ವಿಸ್ತೀರ್ಣ ಹೊಂದಿದೆ. ಸಾಂಪ್ರದಾಯಿಕ ಕೊಡಗಿನ ಪುತ್ತರಿ ಹಬ್ಬಕ್ಕೆ ಮಲ್ಲೇಂಗಡ ಕುಟುಂಬ ನಿಗದಿತ ಗದ್ದೆಯಿಂದಲೇ ಭತ್ತದ ಕದೀರು ದೇವಸ್ಥಾನಕ್ಕೆ ಬರಬೇಕು. ದೇವತಕ್ಕ ಅಣ್ಣೀರ ಕುಟುಂಬದ ಮನೆಯಿಂದ ತಳಿಯತಕ್ಕಿ ಬೊಳಕ್‌ನೊಂದಿಗೆ ಪುತ್ತರಿ ಕದೀರು ತೆಗೆಯಲು ಬರುವುದು ಸಾಂಪ್ರದಾಯಿಕ ಪದ್ಧತಿಯಾಗಿ ನಡೆದುಕೊಂಡು ಬಂದಿದೆ.
ಬಸ್ ವ್ಯವಸ್ಥೆ
ಗೋಣಿಕೊಪ್ಪದಿಂದ ಸರ್ಕಾರಿ ಸಾರಿಗೆ ಬಸ್ ಸೌಲಭ್ಯವಿರುತ್ತದೆ. ಬೆಳಗ್ಗೆ ಗಂಟೆಗೆ ಗೋಣಿಕೊಪ್ಪದಿಂದ ಹೊರಟು ೧೦.೧೫ಕ್ಕೆ ದೇವಸ್ಥಾನ ತಲುಪುತ್ತದೆ. ಮಧ್ಯಾಹ್ನ ೧ ಗಂಟೆಗೆ ಗೋಣಿಕೊಪ್ಪದಿಂದ ಬಂದು ೨.೧೫ಕ್ಕೆ ದೇವಸ್ಥಾನ ತಲುಪಿ ಮತ್ತೆ ಗೋಣಿಕೊಪ್ಪಕ್ಕೆ ಹಿಂತಿರುಗುತ್ತದೆ.
ದೇವಸ್ಥಾನ ಪೂಜೆ ಸೇವೆ ಬಗ್ಗೆ ಮೊಬೈಲ್ ೮೧೯೭೮೭೦೦೫೮ ನಲ್ಲಿ ಮಾಹಿತಿ ಪಡೆಯಬಹುದು.
ಮಾರ್ಗ-೧: ಗೋಣಿಕೊಪ್ಪ- ಪೊನ್ನಂಪೇಟೆ- ಹುದಿಕೇರಿ- ಹೈಸೊಡ್ಲೂರು- ಪೊರಾಡು- ಬಾಡಗರಕೇರಿ- ೨೨ ಕಿ.ಮೀ. ಮಾರ್ಗ-೨: ಗೋಣಿಕೊಪ್ಪ- ಪೊನ್ನಂಪೇಟೆ- ಟಿ. ಶೆಟ್ಟಿಗೇರಿ- ಬಾಡಗರಕೇರಿ-೩೩ ಕಿ.ಮೀ ಮಾರ್ಗ ೧ ರಲ್ಲಿ ಅಂತರ: ಬೆಂಗಳೂರು- ೨೬೩ ಕಿ.ಮೀ,ಮೈಸೂರು-೧೧೩ ಕಿ.ಮೀ,ಮಂಗಳೂರು-೨೦೮ ಕಿ.ಮೀ, ಗೋಣಿಕೊಪ್ಪ-೨೨ ಕಿ.ಮೀ, ಪೊನ್ನಂಪೇಟೆ-೧೭ ಕಿ.ಮೀ, ಹುದಿಕೇರಿ-೭ ಕಿ.ಮೀ.
**
ತಾತ ಮತ್ತು ತಂದೆಯ ನಂತರ ನಾನು ಕಳೆದ ೪೮ ವರ್ಷಗಳಿಂದ ತಕ್ಕ ಮುಖ್ಯಸ್ಥರ ಸೇವೆ ಸಲ್ಲಿಸಲಾಗುತ್ತಿದೆ. ಐತಿಹಾಸಿಕ ದೇವಸ್ಥಾನದ ಮೇಲೆ ನಂಬಿಕೆಯಿಂದ ನೂರಾರು ವರ್ಷಗಳಿಂದ ಜನರು ನಂಬಿಕೆ ಇರಿಸಿದ್ದು, ನಂಬಿದ ಭಕ್ತಾದಿಗಳನ್ನು ಮೃತ್ಯುಂಜಯ ಕಾಪಾಡುತ್ತದೆ ಬಂದಿದೆ. ಅಣ್ಣೀರ ದಾದ ಗಣಪತಿ, ದೇವತಕ್ಕ ಮುಖ್ಯಸ್ಥರು, ಶ್ರೀಮೃತ್ಯುಂಜಯ ದೇವಸ್ಥಾನ.