ಬಡಗಬೆಟ್ಟು ಸೊಸೈಟಿಗೆ 19.37 ಕೋಟಿ ರೂ. ಲಾಭ

udp-badagabettu
Published on

ಉಡುಪಿ: ರಾಜ್ಯದ ಪ್ರತಿಷ್ಠಿತ ಸಹಕಾರ ಸಂಸ್ಥೆ ಬಡಗಬೆಟ್ಟು ಕ್ರೆಡಿಟ್​ ಕೋ-ಆಪರೇಟಿವ್​ ಸೊಸೈಟಿ 2024-25ನೇ ಸಾಲಿನಲ್ಲಿ ರೂ. 2,935 ಕೋಟಿ ವಾರ್ಷಿಕ ವಹಿವಾಟು ನಡೆಸಿದ್ದು, 19.37 ಕೋಟಿ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರ ಕ್ಷೇತ್ರದಲ್ಲಿ 107 ವರ್ಷಗಳ ಸಾರ್ಥಕ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯು ಆರ್ಥಿಕ ವರ್ಷಾಂತ್ಯಕ್ಕೆ 21,519 ಸದಸ್ಯರಿಂದ 4.83 ಕೋಟಿ ರೂ. ಪಾಲು ಬಂಡವಾಳ ಹೊಂದಿದೆ. ಈ ಆರ್ಥಿಕ ವರ್ಷದಲ್ಲಿ 573 ಕೋಟಿ ರೂ. ಠೇವಣಿ ಸಂಗ್ರಹಿಸಿದ್ದು, ಕಳೆದ ಸಾಲಿಗಿಂತ ಶೇ.12.45 ಏರಿಕೆಯಾಗಿದೆ. 477 ಕೋ.ರೂ ಸದಸ್ಯರ ಹೊರಬಾಕಿ ಸಾಲ ಹೊಂದಿದ್ದು, ಕಳೆದ ಸಾಲಿಗಿಂತ ಶೇ. 18.62 ಏರಿಕೆ ಕಂಡಿದೆ. 95.18 ಕೋಟಿ ರೂ. ನಿಧಿ, 229.73 ಕೋಟಿ ರೂ. ಹೂಡಿಕೆಗಳೊಂದಿಗೆ 673.20 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ ಎಂದರು.

ಕುಂದಾಪುರದಲ್ಲಿ ಹೊಸ ಶಾಖೆ

ಸಂಸ್ಥೆಯು ಪ್ರಸ್ತುತ 11 ಶಾಖೆಗಳನ್ನು ಹೊಂದಿದ್ದು, ಈ ಪೈಕಿ 8 ಶಾಖೆಗಳು ಸ್ವಂತ ನಿವೇಶನದಲ್ಲಿವೆ. ಸ್ವಂತ ಕಟ್ಟಡದಲ್ಲಿ ಕುಂದಾಪುರದ ಹೃದಯಭಾಗದಲ್ಲಿ 12ನೇ ಶಾಖೆ ಪ್ರಾರಂಭಿಸಲಾಗುತ್ತಿದ್ದು, ಸದ್ಯದಲ್ಲೇ ಗ್ರಾಹಕರ ಸೇವೆಗೆ ಲಭ್ಯವಾಗಲಿದೆ. ಸತತವಾಗಿ 2 ಬಾರಿ ರಾಷ್ಟ್ರ ಪ್ರಶಸ್ತಿ, 9 ಬಾರಿ ರಾಜ್ಯ ಮಟ್ಟದ ಪ್ರಶಸ್ತಿ, 18 ಬಾರಿ ಅವಿಭಜಿತ ದ.ಕ ಜಿಲ್ಲಾ ಪ್ರಶಸ್ತಿಗಳನ್ನು ಪಡೆದಿದ್ದು, ವಾರ್ಷಿಕ ಸುಮಾರು 20 ಲಕ್ಷ ರೂ. ಶಿಕ್ಷಣ, ಆರೋಗ್ಯ, ಸಾಮಾಜಿಕ ಕಾರ್ಯಕ್ರಮಗಳಿಗೆ ವಿನಿಯೋಗಿಸುತ್ತಿದೆ ಎಂದು ಮಾಹಿತಿ ನೀಡಿದರು.

1,500 ಕೋಟಿ ರೂ. ವ್ಯವಹಾರ ಗುರಿ

ಮುಂದಿನ ವರದಿ ವರ್ಷದಲ್ಲಿ 800 ಕೋಟಿ ರೂ. ಠೇವಣಿ, ರೂ.700 ಕೋಟಿ ಹೊರಬಾಕಿ ಸಾಲದೊಂದಿಗೆ ಒಟ್ಟು 1,500 ಕೋಟಿ ರೂ. ವ್ಯವಹಾರ ನಡೆಸುವ ಗುರಿ ಹೊಂದಲಾಗಿದೆ. ನಗರದಲ್ಲಿ ಈಗಾಗಲೇ ಖರೀದಿಸಿರುವ 1 ಎಕ್ರೆ ಆಸ್ತಿಯಲ್ಲಿ ಅಂದಾಜು 10 ಕೋಟಿ ರೂ. ವೆಚ್ಚದಲ್ಲಿ "ಸಹಕಾರ ಸೌಧ' ನಿಮಾರ್ಣದ ಯೋಜನೆ ರೂಪಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಜಾರ್ಜ್​ ಸಾಮ್ಯುಯೆಲ್​, ಆಡಳಿತ ಮಂಡಳಿ ಸದಸ್ಯರಾದ ಉಮಾನಾಥ ಎಲ್​., ವಿನಯ ಕುಮಾರ್​ ಟಿ.ಎ, ಪದ್ಮನಾಭ ನಾಯಕ್​, ಸೈಯದ್​ ಅಬ್ದುಲ್​ ರಜಾಕ್​, ಸದಾಶಿವ ನಾಯ್ಕ, ಸಾಧು ಸಾಲ್ಯಾನ್​, ಜಯಾ ಶೆಟ್ಟಿ, ಪ್ರಧಾನ ವ್ಯವಸ್ಥಾಪಕ ರಾಜೇಶ್​ ವಿ. ಶೇರಿಗಾರ್​, ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರವಿಣ್​ ಕುಮಾರ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net