

ಅರಸೀಕೆರೆ: ರೈಲ್ವೆ ಕ್ರೀಡಾಂಗಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಇಕ್ಕೆಲಗಳಲ್ಲಿ ಮನಬಂದಂತೆ ಕಸ ಸುರಿಯಲಾಗಿದ್ದು ದುರ್ನಾತ ಮಿತಿ ಮೀರಿದೆ. ನಿತ್ಯ ವಾಯುವಿಹಾರಕ್ಕೆ ತೆರಳುವ ನಾಗರಿಕರು ಮೂಗು ಮುಚ್ಚಿ ಹೋಗುವಂತಾಗಿದ್ದು ಸ್ವಚ್ಛತೆ ಮರೀಚಿಕೆಯಾಗಿದೆ. ರೈಲ್ವೆ ನಿಲ್ದಾಣದಲ್ಲಿ ತಿಂಡಿ, ತಿನಿಸುಗಳನ್ನು ಬಳಸಿ ಬಿಸಾಡಿದ ಪ್ಲಾಸ್ಟಿಕ್ ಚೀಲಗಳನ್ನು ಮನಬಂದಂತೆ ಎಸೆದಿರುವ ದೃಶ್ಯ ರಾರಾಜಿಸುತ್ತಿದೆ. ಉಳಿದ ಅನ್ನ, ಸಾಂಬಾರು ಒಳಗೊಂಡಂತೆ ಇತರ ಪದಾರ್ಥಗಳನ್ನು ಬಿಸಾಡಿರುವುದರಿಂದ ನಾಯಿ, ಜಾನುವಾರುಗಳ ಜೀವಕ್ಕೂ ಸಂಚಕಾರ ಬಂದೊದಗಿದೆ. ಸೊಳ್ಳೆ, ಕ್ರಿಮಿಕೀಟಗಳ ಉತ್ಪಾದನೆ ತಾಣವಾಗಿದ್ದು ವಾಯುವಿಹಾರಕ್ಕೆ ಬರುವವರಿಗೆ ರೋಗ ಭೀತಿ ಎದುರಾಗಿದೆ. ಇಲಾಖೆ ಅಧಿಕಾರಿಗಳು ನೈರ್ಮಲ್ಯ ಕಾಪಾಡುವ ಹೊಣೆಗಾರಿಕೆ ಮರೆತಿರುವುದು ದುರ್ದೈವ. ಕೂಗಳತೆ ದೂರದಲ್ಲಿರುವ ಸಿಬ್ಬಂದಿಗೂ ವಾಸನೆಯ ಬಿಸಿ ತಟ್ಟಿದೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ಇತ್ತ ಗಮನಹರಿಸಿ ಕಸ ತೆರವುಗೊಳಿಸಿ ನೈರ್ಮಲ್ಯ ಕಾಪಾಡಲು ಮುಂದಾಗಬೇಕು.