ಕೆಸಿಸಿ ಬ್ಯಾಂಕ್ ಲೇಔಟ್ ರಸ್ತೆ ದುರಸ್ತಿ ಮಾಡಿ

IMG-20240704-WA0005.jpg
Published on

ಹುಬ್ಬಳ್ಳಿ: ಇಲ್ಲಿಯ ನವನಗರ ಬಳಿಯ ಗಾಮನಗಟ್ಟಿ- ಭೈರಿದೇವರಕೊಪ್ಪ ರಸ್ತೆಯಲ್ಲಿರುವ ಕೆಸಿಸಿ ಬ್ಯಾಂಕ್ ಲೇಔಟ್ ರಸ್ತೆಗಳಲ್ಲಿ ಮಳೆಗಾಲದಲ್ಲಿ ಸಂಚಾರ ಕಷ್ಟಕರವಾಗುತ್ತಿದೆ.
ಕಚ್ಚಾ ರಸ್ತೆಗಳಾಗಿರುವ ಇಲ್ಲಿ ಮಳೆಯಿಂದಾಗಿ ರಾಡಿಮಯವಾಗಿವೆ. ವಾಹನ ಸವಾರರು, ಪಾದಚಾರಿಗಳು ಓಡಾಡಲು ತೀವ್ರ ತೊಂದರೆ ಪಡುತ್ತಿದ್ದಾರೆ.

ಮಹಾನಗರ ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ ಗುಂಡೂರ ಹಾಗೂ ಚಂದ್ರಶೇಖರ ಮನಗುಂಡಿ ಅವರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಲೇಔಟ್ ಸಂರ್ಪೂಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇದು ಇಬ್ಬರು ಪಾಲಿಕೆ ಸದಸ್ಯರಿಗೆ ಗಡಿಯಾಗಿದೆ. ಅಭಿವೃದ್ಧಿ ಕೆಲಸಗಳು ಇಲ್ಲಿ ನಡೆಯುತ್ತಿಲ್ಲ.
ಮುಖ್ಯವಾಗಿ ರಸ್ತೆ ದುರಸ್ತಿ ಮಾಡಿದರೆ ಕನಿಷ್ಠ ಪಕ್ಷ ಓಡಾಡಲು ಅನುಕೂಲವಾಗುತ್ತದೆ ಎಂದು ಸ್ಥಳಿಯರು ಹೇಳುತ್ತಾರೆ.

ಇದೇ ಭಾಗದಲ್ಲಿ ಕಾಲೇಜುಗಳು, ವಸತಿ ಬಡಾವಣೆಗಳು ಸಾಕಷ್ಟಿವೆ. ಜನರ ಸಂಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ, ರಸ್ತೆ ಸುಧಾರಣೆ ಆಗುತ್ತಿಲ್ಲ. ಬೇಸಿಗೆಯಲ್ಲಿ ತಗ್ಗು ಗುಂಡಿಗಳು ಕಾಡಿದರೆ, ಮಳೆಗಾಲದಲ್ಲಿ ಕೊಳಕಿನಿಂದ ತುಂಬಿಕೊಂಡು ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತವೆ. ಇದರ ಜತೆಗೆ ಸೊಳ್ಳೆಗಳ ಕಾಟ ಬೇರೆ ಸಹಿಸಿಕೊಳ್ಳಬೇಕಾಗಿದೆ ಎಂದು ನಿವಾಸಿಗಳು ದೂರಿದ್ದಾರೆ.

ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅವಲೋಕಿಸಬೇಕು. ಶ್ರೀ ಪರಿಹಾರ ನೀಡಬೇಕು ಎಂದು ಸ್ಥಳಿಯರಾದ ಸಚಿನ್, ರಾಜೇಶ, ಪ್ರಮೋದ ಇತರರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net