

ಹರಿಪ್ರಸಾದ್ ನಂದಳಿಕೆ ಕಾರ್ಕಳ ಬೋಳ ಅಂಬರಾಡಿ ಪ್ರದೇಶದ ನಲ್ಲೆಗುತ್ತು ಪರಿಸರದ ಜನರಿಗೆ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಸಚ್ಚೇರಿಪೇಟೆ ರಸ್ತೆ ತೀರಾ ಹದಗೆಟ್ಟಿದ್ದು, ಇಲ್ಲಿನ ನಾಗರಿಕರು ಪ್ರತಿನಿತ್ಯವೂ ಸಂಚಾರಕ್ಕೆ ನರಕಯಾತನೆ ಅನುಭವಿಸುವಂತಾಗಿದೆ. ಶಾಂಭವಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯ ಇಕ್ಕೆಲಗಳ ರಸ್ತೆಯೂ ಸಂಪೂರ್ಣವಾಗಿ ಹಾಳಾಗಿದ್ದು, ಸಂಬಂಧಪಟ್ಟ ಇಲಾಖೆ ಕಣ್ಮುಚ್ಚಿ ಕುಳಿತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಬೋಳ ಅಂಬರಾಡಿಯಿಂದ ನಲ್ಲೆಗುತ್ತು ಮೂಲಕ ಸಚ್ಚೇರಿಪೇಟೆಯನ್ನು ತಲುಪಲು ಇರುವ ಈ ರಸ್ತೆಯು ಹಲವು ವರ್ಷಗಳ ಹಿಂದೆ ನಿರ್ಮಿಸಿದ್ದು, ನಿರ್ವಹಣೆ ಕೊರತೆಯಿಂದಾಗಿ ಇಂದು ತೀವ್ರವಾಗಿ ಹದಗೆಟ್ಟಿದೆ. ರಸ್ತೆ ಡಾಂಬರು ಎದ್ದು ಹೋಗಿ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಸಂಪೂರ್ಣ ಹದಗೆಟ್ಟಿದ್ದರೂ ರಸ್ತೆ ದುರಸ್ತಿಗೆ ಸ್ಥಳೀಯ ಜನಪ್ರತಿನಿಧಿಗಳಾಗಲೀ, ಸಂಬಂಧಪಟ್ಟ ಇಲಾಖೆಯಾಗಲೀ ಮುಂದಾಗಿಲ್ಲ. ಸಚ್ಚೇರಿಪೇಟೆ ಪ್ರದೇಶದಿಂದ ನಲ್ಲೆಗುತ್ತು, ಬೋಳ ಅಂಬರಾಡಿ ಮೂಲಕ ಬೋಳ ಪಂಚಾಯಿತಿಯನ್ನು ಈ ರಸ್ತೆ ಸಂಪರ್ಕಿಸುತ್ತದೆ. ಪರಿಸರದ ಜನ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಗುಂಡಿಗಳಿಂದ ತುಂಬಿರುವ, ಮಳೆಗಾಲದಲ್ಲಿ ಕೆಸರಿನಂತಾಗುವ ರಸ್ತೆಯಲ್ಲಿ ಸಂಚರಿಸಲು ಪರದಾಡುತ್ತಾರೆ. ವಾಹನ ಸವಾರರು ಗುಂಡಿಗಳನ್ನು ತಪ್ಪಿಸಲು ಹೋಗಿ ಆಯತಪ್ಪಿ ಬೀಳುವುದು, ಎದುರಿನಿಂದ ಬರುವ ವಾಹನಗಳಿಗೆ ಡಿಕ್ಕಿ ಹೊಡೆಯುವುಂಥ ಘಟನೆಗಳು ಪದೇಪದೇ ಸಂಭವಿಸುತ್ತಿವೆ. ವಯಸ್ಸಾದವರು, ಶಾಲಾ ಮಕ್ಕಳು ಮತ್ತು ನಿತ್ಯ ಕೆಲಸಕ್ಕೆ ಹೋಗುವವರಿಗೆ ತೀವ್ರ ತೊಂದರೆಯಾಗಿದೆ. ಸಂಬಂಧಪಟ್ಟವರು ರಸ್ತೆ ದುರಸ್ತಿಗೆ ಮುಂದಾಬೇಕೆಂಬುದು ಈ ಭಾಗದ ಸಾರ್ವಜನಿಕರ ಆಗ್ರಹವಾಗಿದೆ.
ನಲ್ಲೆಗುತ್ತು ಪರಿಸರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರಿಗೆ ಸಚ್ಚೇರಿಪೇಟೆ ಪ್ರಮುಖ ಕೇಂದ್ರವಾಗಿದೆ. ಶಾಲೆ, ಕಾಲೇಜು, ಆಸ್ಪತ್ರೆ, ವಾಣಿಜ್ಯ ಮಳಿಗೆಗಳು ಮತ್ತು ಇತರೆ ಸರ್ಕಾರಿ ಕಚೇರಿಗಳಿಗೆ ತೆರಳಲು ಇದೇ ಮುಖ್ಯ ಮಾರ್ಗವಾಗಿದೆ. ರಸ್ತೆ ತೀರಾ ನಾದರುಸ್ತಿಯಲ್ಲಿರುವುದರಿಂದ ತುರ್ತು ಸಂದರ್ಭಗಳಲ್ಲಿ, ವಿಶೇಷವಾಗಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಪರದಾಡುವಂತಾಗಿದೆ. ಚುನಾವಣೆಯ ಸಮಯದಲ್ಲಿ ರಾಜಕಾರಣಿಗಳು ರಸ್ತೆ ದುರಸ್ತಿ ಮಾಡುವುದಾಗಿ ಭರವಸೆ ನೀಡುತ್ತಾರೆ. ಚುನಾವಣೆ ಮುಗಿದ ನಂತರ ಇತ್ತ ಸುಳಿಯುವುದೇ ಇಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.
ಗ್ರಾಮೀಣ ಭಾಗದ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಈ ರಸ್ತೆ ಅಭಿವೃದ್ಧಿ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಮನಸ್ಸು ಮಾಡಬೇಕಾಗಿದೆ. ಹಲವು ದಶಕಗಳಿಂದಲೂ ಇಲ್ಲಿನ ಜನ ಸಂಕಟವನ್ನು ಅನುಭವಿಸುವಂತಾಗಿದೆ. -ಸುರೇಶ್ ಪೂಜಾರಿ, ವಾಹನ ಸವಾರ ರಸ್ತೆಯುದ್ದಕೂ ಬೃಹತ್ ಗಾತ್ರದ ಹೊಂಡಗಳು ನಿರ್ಮಾಣವಾಗಿ ಜಲ್ಲಿ, ಡಾಂಬರು ಎಲ್ಲವೂ ಕಿತ್ತು ಹೋಗಿ ಮಣ್ಣಿನ ರಸ್ತೆಯಂತಾಗಿದೆ. ವಾಹನ ಸವಾರರು ನಿತ್ಯ ಬಿದ್ದು ಎಡವಟ್ಟು ಮಾಡಿಕೊಳ್ಳುವಂತಾಗಿದೆ. -ಸೂರಾಜ್ ಕುಲಾಲ್, ಗ್ರಾಮಸ್ಥರು.