ಬಂಡಳ್ಳಿ, ಶಾಗ್ಯ ಗ್ರಾಮದಲ್ಲಿ ಹದಗೆಟ್ಟ ರಸ್ತೆ

12 HANUR 5
ಬಂಡಳ್ಳಿ ಗ್ರಾಮದ ಸದಾಶಿವ ಬೆಟ್ಟಪ್ಪ ಅವರ ಫೇಸ್‌ಬುಕ್ ಖಾತೆಯ ವಿಡಿಯೋದಲ್ಲಿನ ಹನೂರು - ಬಂಡಳ್ಳಿ ಮಾರ್ಗದ ಹದಗೆಟ್ಟ ರಸ್ತೆಯ ಚಿತ್ರ.
Published on

ಹನೂರು: ಪಟ್ಟಣದ ಮೂಲಕ ಬಂಡಳ್ಳಿ, ಶಾಗ್ಯ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ತೀವ್ರ ಹಾಳಾಗಿದೆ. ಈ ಬಗ್ಗೆ ಗ್ರಾಮಸ್ಥರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಸ್ಯಾಸ್ಪದ ವಿಡಿಯೋ ಹರಿಬಿಟ್ಟಿದ್ದು, ಜನಪ್ರತಿನಿಧಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಣಗಳ್ಳಿ, ಬಂಡಳ್ಳಿ, ಶಾಗ್ಯ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಹಲವು ವರ್ಷಗಳಿಂದ ಬಹುತೇಕ ಕಡೆಗಳಲ್ಲಿ ಗುಂಡಿ ಬಿದ್ದು ಹಾಳಾಗಿದೆ. ಇದರಿಂದ ವಾಹನ ಸಂಚಾರ ನರಕಯಾತನೆಯಾಗಿದೆ. ಈ ರಸ್ತೆಯಲ್ಲಿ ಸಾವು, ನೋವುಗಳು ಸಂಭವಿಸಿವೆ. ರಸ್ತೆ ಅಭಿವೃದ್ಧಿಪಡಿಸುವಂತೆ ಹಲವು ವರ್ಷಗಳಿಂದಲೂ ಈ ಭಾಗದ ಜನರು ಜನಪ್ರತಿನಿಧಿಗಳಲ್ಲಿ ಒತ್ತಾಯಿಸುತ್ತಲೇ ಇದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.

ಇದರಿಂದ ಬೇಸತ್ತ ಬಂಡಳ್ಳಿ ಗ್ರಾಮದ ಸದಾಶಿವ ಬೆಟ್ಟಪ್ಪ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹನೂರಿನಿಂದ ಗ್ರಾಮದವರೆಗಿನ ರಸ್ತೆಯ ದುಸ್ಥಿತಿಯ ವಿಡಿಯೋವನ್ನು ಹಾಸ್ಯಾಸ್ಪದ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ನಮ್ಮ ಗ್ರಾಮದ ರಸ್ತೆ ಬಂಗಾರದ ರಸ್ತೆ, ಕಣ್ಣು ಮುಚ್ಚಿ ಕುಳಿತುಕೊಂಡರೂ ಮನೆ ತಲುಪಬಹುದು. ರಸ್ತೆಯಲ್ಲಿ ಹೋಗುತ್ತಿದ್ದರೆ ತೇಲಾಡಿಕೊಂಡು ಹೋಗಬಹುದು. ಸವಾರರಿಗೆ ಬೇಜಾರಾದರೆ ರಸ್ತೆಯಲ್ಲಿ ಸಿಗುವ ಸ್ವಿಮಿಂಗ್ ಫುಲ್‌ನಲ್ಲಿ ಈಜಾಡಬಹುದು. ಈ ರಸ್ತೆಯಲ್ಲಿ ದೊಡ್ಡಕೆರೆ, ಚಿಕ್ಕಕೆರೆ ಎಲ್ಲವೂ ಸಿಗುತ್ತೆ. ಗರ್ಭಿಣಿಯರಿಗೆ ಹೆರಿಗೆ ಮಾಡಿಸಲು ಆಸ್ಪತ್ರೆಗೆ ಹೋಗಬೇಕಾಗಿಲ್ಲ. ಈ ರಸ್ತೆಯಲ್ಲಿ ಬಂದರೆ ತಾನಾಗಿಯೇ ಹೆರಿಗೆಯಾಗುತ್ತದೆ. ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಇಂತಹ ರಸ್ತೆಗಳಿದ್ದರೆ ಕಾಮೆಂಟ್ ಮಾಡಿ ಎಂದು ತಿಳಿಸುವುದರ ಮೂಲಕ ರಸ್ತೆ ಅಭಿವೃದ್ಧಿಯ ಬಗ್ಗೆ ಗಮನಹರಿಸದ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net