ಕೆ.ಆರ್.ಆಸ್ಪತ್ರೆಯಲ್ಲಿ ಕೆಟ್ಟಿರುವ ಶವಾಗಾರದ ಶೀತಲಯಂತ್ರಗಳು; ಮೃತದೇಹ ಸಂರಕ್ಷಣೆ ಕಷ್ಟಸಾಧ್ಯ

20
Published on

ಮೈಸೂರು: ನಗರದ ಕೆ.ಆರ್.ಆಸ್ಪತ್ರೆಯ ಶವಾಗಾರದ ಶೀತಲಯಂತ್ರಗಳು ಕೆಟ್ಟು ಶವಗಳನ್ನು ಸಂರಕ್ಷಣೆ ಮಾಡುವುದೇ ಕಷ್ಟವಾಗುತ್ತಿದೆ.
ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಜಿಲ್ಲೆಗಳಿಂದ ಜನರ ಚಿಕಿತ್ಸೆಯ ಆಧಾರ ಕೇಂದ್ರವಾಗಿರುವ ಕೆ.ಆರ್.ಆಸ್ಪತ್ರೆಯಲ್ಲಿ ಶವಾಗಾರವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಶವಾಗಾರದಲ್ಲಿ ಶವಗಳನ್ನು ಸಂರಕ್ಷಣೆ ಮಾಡುವ ಮೂರು ಘಟಕಗಳು ಇದ್ದು, ಒಂದೊಂದು ಘಟಕಗಳಲ್ಲಿ ಆರು ಶವಗಳನ್ನು ಇಡಬಹುದು. ಆದರೆ ಕೆಲ ತಿಂಗಳಿನಿಂದ ಎರಡು ಘಟಕಗಳು ಕೆಟ್ಟಿದ್ದು, ಈಗ ಒಂದು ಘಟಕದಿಂದ ಕೇವಲ ಆರು ಶವಗಳನ್ನು ಮಾತ್ರ ಸಂರಕ್ಷಣೆ ಮಾಡುವ ಸ್ಥಿತಿ ಇದೆ.
ನಿತ್ಯ 10 ರಿಂದ 15 ಶವಗಳು ಶವಾಗಾರಕ್ಕೆ ಬರುತ್ತಿದ್ದು, ಶವಪರೀಕ್ಷೆ ಮಾಡಿ ಕೆಲವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗುತ್ತದೆ. ಕೆಲ ಶವಗಳನ್ನು ಒಂದೆರಡು ದಿನಗಳ ಕಾಲ ಸಂರಕ್ಷಣೆ ಮಾಡಬೇಕಾಗುತ್ತದೆ. ಜತೆಗೆ ಅಪರಿಚಿತ ಶವಗಳು ಸಿಕ್ಕರೆ ಅವುಗಳನ್ನು ಕನಿಷ್ಠ ವಾರವಾದರೂ ಸಂರಕ್ಷಣೆ ಮಾಡುವುದು ಅನಿವಾರ್ಯ .
ಶವಗಳನ್ನು ಸಂರಕ್ಷಣೆ ಮಾಡಲು ಶೀತಲಯಂತ್ರಗಳು ಸುಸ್ಥಿತಿಯಲ್ಲಿ ಇಡಬೇಕಿದೆ. ಆದರೆ ಎರಡು ಘಟಕಗಳು ಕೆಟ್ಟಿದ್ದು, ಒಂದೇ ಘಟಕ ಇರುವುದರಿಂದ ಆರು ಶವಗಳನ್ನು ಸಂರಕ್ಷಿಸಲು ಮಾತ್ರ ಅವಕಾಶವಿದೆ. ಶವಗಳು ಹೆಚ್ಚಾಗಿರುವುದರಿಂದ ಒಂದರ ಮೇಲೆ ಒಂದನ್ನು ಇಡಲಾಗುತ್ತಿದೆ. ಹೆಚ್ಚು ದಿನ ಶವಗಳನ್ನು ಸಂರಕ್ಷಣೆ ಮಾಡಲು ಆಗದಿದ್ದಾಗ ಶವಗಳು ದುರ್ವಾಸನೆ ಬೀರಲಿದ್ದು, ಶವಾಗಾರದ ಸಿಬ್ಬಂದಿ ನರಕಯಾತನೆ ಅನುಭವಿಸುತ್ತಿದ್ದಾರೆ.
ಕೆಟ್ಟು ನಿಂತ ಯಂತ್ರ ದುರಸ್ತಿಗೊಳಿಸುವಂತೆ ಶವಾಗಾರದ ಸಿಬ್ಬಂದಿ, ಮುಖ್ಯಸ್ಥರಿಗೆ ಪತ್ರ ಬರೆದಿದ್ದರೂ ದುರಸ್ತಿ ಕಾರ್ಯ ನಡೆದಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಶವ ಪರೀಕ್ಷೆ ನಂತರ ಮೃತದೇಹಗಳನ್ನು ಕೊಂಡೊಯ್ಯಲು ಬರುವ ಸಂಬಂಧಿಕರು ಶವಾಗಾರದ ದುಸ್ಥಿತಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ದುರ್ವಾಸನೆ ಸಹಿಸಿಕೊಳ್ಳುವುದು ಒಂದೆಡೆಯಾದರೆ, ರೋಗರುಜಿನ ಹರಡುವ ಅಪಾಯವೂ ಇದೆ. ಮೃತದೇಹಗಳಿಗೂ ಒಂದು ಗೌರವ ಇದೆ. ಆದರೆ ಇಲ್ಲಿ ಮೃತದೇಹಗಳನ್ನ್ನು ಕಸದ ರಾಶಿಯಂತೆ ಒಂದರ ಮೇಲೆ ಒಂದು ಇರಿಸಿ ಅಗೌರವ ಸೂಚಿಸಲಾಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ.

ತಕ್ಷಣವೇ ದುರಸ್ತಿ ಮಾಡಲಾಗುವುದು
ಕೆಟ್ಟಿರುವ ಶೀತಲ ಯಂತ್ರಗಳನ್ನು ತಕ್ಷಣ ದುರಸ್ತಿಗೊಳಿಸಿ ನಾಳೆಯೊಳಗೆ ಕಾರ್ಯರಂಭ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ನಿರ್ಲಕ್ಷೃ ವಹಿಸಿದ ಮುಖ್ಯಸ್ಥರು, ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ರೋಗಗಳ ಸೇವೆಗಾಗಿಯೇ ಇರುವ ಆಸ್ಪತ್ರೆಯಲ್ಲಿ ನಿರ್ವಹಣೆಗೆ ತೊಂದರೆ ಇಲ್ಲ. ಕೆಲವು ನಿರ್ವಹಣೆ ಜವಾಬ್ದಾರಿಯನ್ನು ಗುತ್ತಿಗೆ ನೀಡಲಾಗಿದ್ದು, ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಆದೇಶ ನೀಡಲಾಗಿದೆ.
ಡಾ.ದಾಕ್ಷಾಯಣಿ
ಡೀನ್, ಮೈಸೂರು ವೈದ್ಯಕೀಯ ಮಹಾವಿದ್ಯಾಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net