

ಮಂಡ್ಯ: ರಾಜ್ಯದಲ್ಲಿ ಶೇ.35ರಷ್ಟಿರುವ ಹಿಂದುಳಿದ ವರ್ಗವನ್ನು ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಶ್ರೇಯೋಭಿವೃದ್ಧಿ ಮಾಡುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಆರೋಪಿಸಿದರು.
ನಗರದ ಗ್ರೀನ್‌ಪ್ಯಾಲೇಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಒಕ್ಕೂಟದ ಜಿಲ್ಲಾ ಶಾಖೆ ರಚನೆ ಹಾಗೂ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಮಾತನಾಡಿದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಡಿ.ದೇವರಾಜ ಅರಸು ಅವರು ಹಾವನೂರು ವರದಿ ಜಾರಿಗೊಳಿಸಿದ ಬಳಿಕ ಕೇಂದ್ರದಲ್ಲಿ ಕೂಡ ಮಂಡಲ್ ಆಯೋಗದ ಮೂಲಕ ಹಿಂದುಳಿದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಕಲ್ಪಿಸಲಾಯಿತು. ಆದರೆ ಮೀಸಲಾತಿ ಮತ್ತು ಸವಲತ್ತು ಹಂಚಿಕೆಯಲ್ಲಿ ಬಿಜೆಪಿ ಸರ್ಕಾರ ತಾರತಮ್ಯವೆಸಗುತ್ತಿದೆ. ಮೀಸಲಾತಿ ವಿರೋಧಿಶಕ್ತಿಯಾಗಿರುವ ಬಿಜೆಪಿ ಬಗ್ಗೆ ಹಿಂದುಳಿದ ಜಾತಿಗಳು ಎಚ್ಚರಿಕೆಯಿಂದ ಇರಬೇಕು. ನ್ಯಾಯಾಂಗ, ಬ್ಯಾಂಕಿಂಗ್ ಕ್ಷೇತ್ರ ಸೇರಿದಂತೆ ಖಾಸಗಿ ಕ್ಷೇತ್ರಗಳಲ್ಲೂ ಮೀಸಲಾತಿಗಾಗಿ ಹೋರಾಟ ಮಾಡಬೇಕಾಗಿದೆ. ಹಿಂದುಳಿದ ವರ್ಗಗಳು ತಮ್ಮ ಹಕ್ಕುಗಳನ್ನು ಹೋರಾಟದ ಮೂಲಕ ಕೇಳಿ ಪಡೆಯುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಸಲಹೆ ನೀಡಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ಹಿಂದುಳಿದ ಸಮುದಾಯಗಳು ಜಾತಿವಾರು ಸಂಘಟನೆ ಮತ್ತು ಹೋರಾಟದ ಜತೆಗೆ ಸಮುದಾಯಗಳ ಸಮಗ್ರ ಏಳಿಗೆಗಾಗಿಯೂ ಶ್ರಮಿಸಬೇಕಿದೆ. ರಾಜಕೀಯವಾಗಿ ಚುನಾವಣೆಗಳಲ್ಲಿ ಉತ್ತರ ನೀಡುವುದರ ಮೂಲಕ ಹಿಂದುಳಿದ ವರ್ಗಗಳಿಗೆ ಪೂರಕವಾದ ಸರ್ಕಾರವನ್ನು ಅಸ್ತಿತ್ವಕ್ಕೆ ತರಬೇಕು ಎಂದರು.
ಒಕ್ಕೂಟದ ಕೆ.ಎಂ.ಕೃಷ್ಣಮೂರ್ತಿ, ಚಿಕ್ಕನಾಯಕನಹಳ್ಳಿ ಸಿ.ಎಲ್.ರವಿಕುಮಾರ್, ಮುಖಂಡರಾದ ಎಂ.ಬೋರೇಗೌಡ, ಬಿ.ಲಿಂಗಯ್ಯ, ಸುರೇಶ್, ಡಿ.ರಮೇಶ್, ಎಂ.ಕೃಷ್ಣ ಇತರರಿದ್ದರು.