ಪ್ರವರ್ಗ-2ಎಗೆ ಸೇರಿಸದಂತೆ ಆಗ್ರಹ: ಹಿಂದುಳಿದ ಜಾತಿಗಳ ಒಕ್ಕೂಟದಿಂದ ಮನವಿ ಸಲ್ಲಿಕೆ

Backward Castes Union protest Mandya
Published on

ಮಂಡ್ಯ: ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಹಿಂದುಳಿದ ಪ್ರವರ್ಗ-2ಎಗೆ ಸೇರಿಸಬಾರದು ಎಂದು ಒತ್ತಾಯಿಸಿ ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾ ಶಾಖೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರ ಪಂಚಮಸಾಲಿ ಸಮುದಾಯದ ಬೇಡಿಕೆಯನ್ನು ಯಾವುದೇ ಕಾರಣಕ್ಕೂ ಪರಿಗಣಿಸಬಾರದು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ. ಪಂಚಮಸಾಲಿ ಲಿಂಗಾಯತರು 3ಬಿ ವರ್ಗದಡಿ ಮೀಸಲಾತಿ ಸೌಲಭ್ಯ ಪಡೆಯುತ್ತಿದ್ದಾರೆ. ಹಿಂದುಳಿದ ವರ್ಗಗಳಿಗೆ ನೀಡಿರುವ ಶೇ.15ರ ಮೀಸಲಾತಿಯ ಲಾಭ ಪಡೆಯಲು 2ಎ ಪ್ರವರ್ಗದಡಿ ಮೀಸಲಾತಿ ನೀಡುವಂತೆ ಸಮುದಾಯದವರು ಪ್ರತಿಭಟನೆ ನಡೆಸಿ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಯಾವುದೇ ಕಾರಣಕ್ಕೂ ಪಂಚಮಸಾಲಿಗಳನ್ನು 2ಎ ಪ್ರವರ್ಗಕ್ಕೆ ಸೇರಿಸುವ ತಪ್ಪು ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದ್ದೆಯಾದಲ್ಲಿ ರಾಜ್ಯವಾರು ಹಿಂದುಳಿದ ಜಾತಿಗಳ ಎಲ್ಲ ವರ್ಗಗಳು ಉಗ್ರ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ಪಕ್ಷಕ್ಕೆ ಶೇ.90ರಷ್ಟು ಹಿಂದುಳಿದ ಜಾತಿಗಳು ಮತ ಚಲಾಯಿಸಿ 139 ಶಾಸಕರು ಗೆಲ್ಲಲು ಕಾರಣೀಭೂತರಾಗಿದ್ದಾರೆ. ಅವರಿಗೆ ಯಾವುದೇ ಕಾರಣಕ್ಕೂ ಅನ್ಯಾಯ ಮಾಡಬಾರದು ಎಂದು ಹೇಳಿದರು.

ಹಿಂದುಳಿದ ವರ್ಗಗಳಲ್ಲಿ 200 ಜಾತಿಗಳಿದ್ದು, ಹಿಂದುಳಿದ ಪ್ರವರ್ಗ-2ಎನಲ್ಲಿ 102 ಜಾತಿಗಳು ಮೀಸಲಾತಿ ಪಡೆಯುತ್ತಿದ್ದು ಈಗ ಇರುವ ಜನಗಳಿಗೆ ಮೀಸಲಾತಿ ಸಿಗದೇ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಸೇರಿಸಿ ಎಂದು ಹೋರಾಟ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪಂಚಮಸಾಲಿಗಳು 2ಎ ಪ್ರವರ್ಗಕ್ಕೆ ಸೇರಿಸಿ ಎಂದು ಹೋರಾಟ ಮಾಡುತ್ತಿರುವುದನ್ನು ಖಂಡಿಸುತ್ತೇವೆ. ಹಿಂದುಳಿದ ಜಾತಿಗಳು ಮೀಸಲಾತಿ ಪ್ರಮಾಣ ಹೆಚ್ಚಿಸಬೇಕೆಂದು ಹೋರಾಟ ಮಾಡುತ್ತಿದ್ದಾರೆ. ಹಿಂದುಳಿದ ವರ್ಗಗಳಿಗೆ ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಮೀಸಲಾತಿ ಬೇಕು ಎಂದು ಹೋರಾಟ ಮಾಡುತ್ತಿದ್ದರೂ ಬಿಜೆಪಿ ಪಕ್ಷದವರು ಮಾತನಾಡದೆ ಸುಮ್ಮನೆ ಇದ್ದಾರೆ. ಯಾವ ವರ್ಗಕ್ಕೂ ಸಾಮಾಜಿಕ ನ್ಯಾಯ ಕಲ್ಪಿಸುವ ಕೆಲಸ ಮಾಡದ ಬಿಜೆಪಿ ಪಂಚಮಸಾಲಿಗಳಿಗೆ ಹಿಂದುಳಿದ ಪ್ರವರ್ಗ-2ಎಗೆ ಸೇರಿಸಲು ಹೋರಾಟ ಮಾಡುತ್ತಿರುವುದು ರಾಜಕೀಯ ನಾಟಕವೆಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಎಚ್.ನಾಗರಾಜು, ಡಿ.ದೇವರಾಜು ಅರಸು ಹಿಂದುಳಿದ ವೇದಿಕೆ ಅಧ್ಯಕ್ಷ ಎಲ್.ಸಂದೇಶ, ಸಾತನೂರು ಕೃಷ್ಣ, ಎನ್.ದೊಡ್ಡಯ್ಯ, ರಮೇಶ್, ಎಂ.ಎಸ್.ರಾಜಣ್ಣ, ಸತೀಶ್, ಶಿವರುದ್ರ, ಪುಟ್ಟಬಸವಯ್ಯ, ನಾಗರತ್ನ, ಶಕುಂತಲಾ, ರಮೇಶ್‌ಬಾಬು, ಪುಟ್ಟಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net