

ರಾಮನಗರ: ಕನಕಪುರ ತಹಸೀಲ್ದಾರ್ ವರ್ಷಾ ಅವರನ್ನು ಗ್ರೇಡ್ 1ರಲ್ಲಿಯೇ ಮುಂದುವರಿಸುವಂತೆ ಕನಕಪುರದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸರ್ಕಾರವನ್ನು ಒತ್ತಾಯಿಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಹಾಗೂ ಹಾರೋಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಪ್ಪ, ಕೆಎಎಸ್ ಅಧಿಕಾರಿ ವರ್ಷಾ ದಕ್ಷ ಅಧಿಕಾರಿಯಾಗಿದ್ದು, ಬಡವರ ಬಗ್ಗೆ ಕಾಳಜಿ ಹೊಂದಿದ್ದಾರೆ. ಕನಕಪುರ, ಹಾರೋಹಳ್ಳಿ ಮತ್ತು ಮರಳವಾಡಿ ವ್ಯಾಪ್ತಿಯಲ್ಲಿ ಅರ್ಹರನ್ನು ಗುರುತಿಸಿ ಸಾಗುವಳಿ ಚೀಟಿ ವಿತರಣೆಗೆ ವರ್ಷಾ ಮುಂದಾಗಿದ್ದು, ಕೆಲವರಿಗೆ ಅಸಹನೀಯವಾಗಿದೆ. ಇದೇ ರೀತಿ ಹಲವು ವಿಚಾರಗಳಲ್ಲಿ ಬಡವರ ಪರ ನಿಂತಿದ್ದಾರೆ. ಇದೀಗ ಅವರನ್ನು ಗ್ರೇಡ್ 1ರಿಂದ ಗ್ರೇಡ್ 2ಕ್ಕೆ ಹಿಂಬಡ್ತಿ ನೀಡಲು ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ. ಹಾಗೊಮ್ಮೆ ಅವರ ವಿರುದ್ಧ ಕರ್ತವ್ಯಲೋಪ ಆರೋಪಗಳಿದ್ದರೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.
ಕನಕಪುರದಲ್ಲಿ ಈ ಹಿಂದೆ ಅಧಿಕಾರ ನಡೆಸಿದ ತಹಸೀಲ್ದಾರರು, ಅಕ್ರಮ ಗಣಿಗಾರಿಕೆಗೆ ಸಹಕರಿಸಿ ಕೋಟಿ ಹಣ ಬಾಚಿದ್ದಾರೆ. ಕೆಲವು ಅಧಿಕಾರಿಗಳಂತೂ ಕನಕಪುರದ ಪ್ರಭಾವಿ ರಾಜಕಾರಣಿಗಳ ಬಂಟರಂತೆ ನಡೆದುಕೊಂಡಿದ್ದಾರೆ. ಇಂತಹ ಅಧಿಕಾರಿಗಳನ್ನು ಪೋಷಿಸಿದ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಬಡವರ ಪರ ಕಾಳಜಿ ಹೊಂದಿರುವ ಅಧಿಕಾರಿಯನ್ನು ಉಳಿಸಿಕೊಳ್ಳಬೇಕು ಎಂದರು. ದಕ್ಷ ಅಧಿಕಾರಿಗೆ ಹಿಂಬಡ್ತಿಯಾದರೆ ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಕನಕಪುರ ಶಾಸಕ ಡಿ.ಕೆ.ಶಿವಕುಮಾರ್, ರಾಮನಗರ ಶಾಸಕಿ ಅನಿತಾ ಕುಮಾರ ಸ್ವಾಮಿಗೆ ಶೋಭೆ ತರುವುದಿಲ್ಲ ಎಂದರು.