ಅನಧಿಕೃತ ಕಟ್ಟಡಗಳ ಸರ್ವೆಗೆ ಹಿನ್ನಡೆ: ಬಿಬಿಎಂಪಿ ಅಧಿಕಾರಿಗಳಿಗೇಕೆ ಅಸಾಧ್ಯ

illigal building
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಶಿಥಿಲ ಹಾಗೂ ಅನಧಿಕೃತ ಕಟ್ಟಡಗಳನ್ನು ಗುರುತಿಸುವ ಸರ್ವೆ ಕಾರ್ಯಕ್ಕೆ ಆರಂಭಗೊಂಡು ಒಂದು ವಾರ ಕಳೆದರೂ, ಈವರೆಗೆ ಪೂರ್ಣಪ್ರಮಾಣದಲ್ಲಿ ಟೇಕ್ ಆಫ್​​ ಆಗಿಲ್ಲ. ಅಗತ್ಯ ಸಿದ್ಧತೆ ಮಾಡಿಕೊಳ್ಳದ ಕಾರಣ ಸಮೀಕ್ಷೆಗೆ ವಿಧ್ಯುಕ್ತ ಚಾಲನೆಯೂ ಸಿಕ್ಕಿಲ್ಲ.

ಇತ್ತೀಚಿಗೆ (ಅ.24) ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅತಿವೃಷ್ಟಿ ವಿಪತ್ತು ನಿರ್ವಹಣೆ ಕುರಿತು ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದರು. ಭಾರಿ ಮಳೆಯಿಂದಾಗಿ ಹಳೆಯ ಹಾಗೂ ಶಿಥಿಲ ಕಟ್ಟಡಗಳಿಗೆ ಅಪಾಯ ಇದೆ ಎಂಬುದನ್ನು ಅಧಿಕಾರಿಗಳು ಗಮನ ಸೆಳೆದಿದ್ದರು. ಜತೆಗೆ ಪಾಲಿಕೆ ಅನುಮತಿ ಇಲ್ಲದೆ ನಿಯಮಬಾಹಿರವಾಗಿ ನಿರ್ಮಾಣವಾಗಿರುವ ಹಾಗೂ ನಿರ್ಮಾಣವಾಗುತ್ತಿರುವ ಕಟ್ಟಡ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಅ.28ರಿಂದಲೇ ಎಲ್ಲ ವಲಯಗಳಲ್ಲೂ ಏಕಕಾಲದಲ್ಲಿ ಸರ್ವೆ ಆರಂಭವಾಗುವುದೆಂದು ಡಿಸಿಎಂ ಪ್ರಕಟಿಸಿದ್ದರೂ, ಎಲ್ಲೂ ಸಮೀಕ್ಷೆ ನಡೆಸಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.

ಕಳೆದ ಸೋಮವಾರ ಮೊದಲ ದಿನ ಒಂದೆರಡು ವಲಯಗಳಲ್ಲಿ ಪ್ರಾಯೋಗಿಕವಾಗಿ ಸರ್ವೆ ನಡೆಸಲಾಯಿತು. ಆದರೆ, ಕಟ್ಡಗಳನ್ನು ಹುಡುಕಿಕೊಂಡು ಹೋಗಿ ಅವುಗಳ ಮಾಲೀಕರಿಂದ ದಾಖಲೆಗಳನ್ನು ಪಡೆದು ಪರೀಕ್ಷಿಸಲು ಹೆಚ್ಚಿನ ಸಮಯ ಹಿಡಿಯುತ್ತಿದೆ. ಕೆಲವೆಡೆ ಮಾಲೀಕರು ಮಾಹೀಗಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇಂತಹವರ ವಿರುದ್ಧ ನಿಯಮಾವಳಿಯಂತೆ ತಕ್ಷಣವೇ ಕ್ರಮ ಕೈಗೊಳ್ಳಲು ಸಾಧ್ಯವಾಗದೆ, ನೋಟಿಸ್ ನೀಡಿದ ಬಳಿಕವಷ್ಟೇ ಶಿಸ್ತುಕ್ರಮ ತೆಗೆದುಕೊಳ್ಳಬೇಕಿದೆ. ಇದನ್ನೇ ನೆಪವಾಗಿಸಿಕೊಂಡು ಅಧಿಕಾರಿಗಳು ಸರ್ವೆಯನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ.

ಸಿದ್ಧತೆಗೆ ಸಮಯ ವ್ಯಯ:

ಸರ್ವೆ ಕಾರ್ಯವನ್ನು ಆಯಾ ವಲಯದ ಜಂಟಿ ಆಯುಕ್ತರ ನೇತೃತ್ವ ವಹಿಸಲಾಗಿದೆ. ಈ ತಂಡದಲ್ಲಿ ಕಂದಾಯ, ಇಂಜಿನಿಯರಿಂಗ್, ಆರೋಗ್ಯ ವಿಭಾಗದ ಅಧಿಕಾರಿಗಳ ಜತೆಗೆ ಎಇಇ, ಎಇಗಳನ್ನು ಬಳಸಿಕೊಳ್ಳಬೇಕಿದೆ. ಇಡೀ ತಂಡ ಸ್ಥಳಪರಿಶೀಲನೆಗೆ ಹೋದಲ್ಲಿ ಕಚೇರಿಗಳಲ್ಲಿ ಇನ್ನಿತರ ಕಾರ್ಯಕ್ಕೆ ಅಡ್ಡಿಯಾಗಲಿದೆ. ಜತೆಗೆ ಈಗಾಗಲೇ ಕೈಗೊಂಡಿರುವ ಇ-ಖಾತಾ ಸಂಬಂಧಿತ ಸ್ವತ್ತುಗಳ ಸ್ಥಳಪರಿಶೀಲನಾ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಕೆಲ ವಲಯಗಳಲ್ಲಿ ಸರ್ವೆಗೆ ಚಾಲನೆ ದೊರೆತಿದ್ದರೂ, ದೀಪಾವಳಿ ಹಬ್ಬದ ರಜೆ ಕಾರಣ ಅಧಿಕಾರಿಗಳು ತಂಡದೊಂದಿಗೆ ತೆರಳಲು ಸಾಧ್ಯವಾಗಿಲ್ಲ. ಇದರ ಹೊರತಾಗಿಯೂ ಮಹದೇವಪುರ ಹಾಗೂ ಪಶ್ಚಿಮ ವಲಯಗಳಲ್ಲಿ ಬೆರಳೆಣಿಕೆಯಷ್ಟು ಶಿಥಿಲ ಕಟ್ಟಡಗಳನ್ನು ಮಾತ್ರ ತೆರವುಗೊಳಿಸಲಾಗಿದೆ.

5 ಲಕ್ಷಕ್ಕೂ ಹೆಚ್ಚು ಅನಧಿಕೃತ ಬಿಲ್ಡಿಂಗ್?:

2022ರಲ್ಲಿ ಪಾಲಿಕೆ ಅಂದಾಜಿಸಿದ್ದಂತೆ 2.5 ಲಕ್ಷ ಸಂಖ್ಯೆಯಷ್ಟು ಅನಧಿಕೃತ ಕಟ್ಟಡಳಿದ್ದವು. ಈಗ ಇವುಗಳ ಸಂಖ್ಯೆ ದುಪ್ಪಟ್ಟಾಗಿವೆ. ಇಂತಹ ಕಟ್ಟಡಗಳು ಹೊಸ ವಲಯಗಳಲ್ಲಿ ನಿರ್ಮಾಣವಾಗಿದ್ದು, ಈಗಲೂ ಕೆಲ ಕಟ್ಟಡಗಳು ನಿರ್ಮಾಣ ಕಾರ್ಯವನ್ನು ಮುಂದುವರಿಸಿವೆ. ಆದರೂ ಅನಧಿಕೃತ ಬಿಲ್ಡಿಂಗ್‌ಗಳ ನಿಖರ ಮಾಹಿತಿ ಇಲ್ಲದ ಕಾರಣ ಅಧಿಕಾರಿಗಳು ಆಯಾ ಸ್ಥಳಗಳಿಗೆ ತೆರಳಿ ಸ್ಥಳಪರಿಶೀಲನೆ ನಡೆಸಲು ಸಾಕಷ್ಟು ಸಮಯ ಹಿಡಿಯಲಿದೆ. ಜತೆಗೆ ಪಾಲಿಕೆ ಬಳಿ ಇಂತಹ ಕಟ್ಟಡಗಳ ದತ್ತಾಂಶ ಇಲ್ಲದಿರುವುದರಿಂದ ಸಮೀಕ್ಷೆ ಕಾರ್ಯ ಇಂತಿಷ್ಟೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಲಾಗದು. ಇತರ ಕಾರ್ಯಬಾಹುಳ್ಯದ ಒತ್ತಡದಿಂದಾಗಿ ಗಡುವಿನೊಳಗೆ ಸರ್ವೆ ಪೂರ್ಣಗೊಳಿಸುವುದು ಅನುಮಾನ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net