

ವಿಜಯಪುರ: ಐತಿಹಾಸಿಕ ನಗರಿಯ ತೇಕಡೆ ಗಲ್ಲಿಯ ನೂತನ ಗಣೇಶ ದೇವಸ್ಥಾನದ ಉದ್ಘಾಟನೆ ಹಿನ್ನೆಲೆ ಸೋಮವಾರ ಮೂರ್ತಿ ಹಾಗೂ ಕಳಸದ ಭವ್ಯ ಮೆರವಣಿಗೆ ನಡೆಯಿತು.
ಡೊಳ್ಳು ಕುಣಿತ, ಗೊಂಬೆ ಕುಣಿತ, ಕುಂಭ ಮೇಳ ಸೇರಿದಂತೆ ವಿವಿಧ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮೂರ್ತಿ ಮತ್ತು ಕಳಸದ ಮೆರವಣಿಗೆ ನಡೆಯಿತು.
ಗೌಡರ ಓಣಿಯ ಬಸವೇಶ್ವರ ದೇವಸ್ಥಾನದಿಂದ ಆರಂಭಗೊಂಡ ಈ ಭವ್ಯ ಮೆರವಣಿಗೆ ಮನಗೂಳಿ ಅಗಸಿ ರಸ್ತೆ, ಯಡವಣ್ಣವರ ಗಲ್ಲಿಯ ಅಂಬಾಭವಾನಿ ದೇವಸ್ಥಾನ ಮಾರ್ಗವಾಗಿ ನೂತನ ದೇವಸ್ಥಾನ ತಲುಪಿತು.
ಕುಂಭ ಹೊತ್ತು, ಆರತಿ ಹಿಡಿದು ಸಾಗಿದ ಮಹಿಳೆಯರು ಹಾಗೂ ಬಬಲೇಶ್ವರದ ಡೊಳ್ಳು ಕುಣಿತ, ಸಾರವಾಡದ ಗೊಂಬೆ ಕುಣಿತ ಮೆರವಣಿಗೆಗೆ ಮೆರುಗು ನೀಡಿದವು. ಓಣಿಯ ತುಂಬಾ ರಂಗೋಲಿಯ ಚಿತ್ತಾರ ಕಣ್ಮನ ಸೆಳೆಯಿತು. ಮೃತ್ಯುಂಜಯ ಸಾಕ್ಷಿ ಗಜಾನನ ಯುವಕ ಮಂಡಳಿ ಸದಸ್ಯರು, ಹಿರಿಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ನ.4 ರಂದು ದೇವಸ್ಥಾನ ಉದ್ಘಾಟನೆಗೊಳ್ಳಲಿದೆ. ತನ್ನಿಮಿತ್ತ ಬೆಳಗ್ಗೆ 6 ರಿಂದ ಹೋಮ, ಹವನ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಅಭಿಷೇಕ ಹಾಗೂ ಕಳಸಾರೋಹಣ ಕಾರ್ಯಕ್ರಮ ನಡೆಯಲಿದೆ. ನಂತರ ಮನಗೂಳಿಯ ಸಂಸ್ಥಾನ ಹಿರೇಮಠದ ಸಂಗನಬಸವ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ದೇವಸ್ಥಾನವನ್ನು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉದ್ಘಾಟಿಸುವರು. ಸರ್ವ ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ ಎಂದು ಗಜಾನನ ಕಮಿಟಿಯ ಪ್ರಮುಖರು ತಿಳಿಸಿದ್ದಾರೆ.