ಹಬ್ಬ ಹಿನ್ನೆಲೆ: ಉದ್ಯಾನನಗರದಲ್ಲಿ ರಾಶಿ ರಾಶಿ ಕಸ

kasa
Published on

ಬೆಂಗಳೂರು:ದಸರಾ ನಿಮಿತ್ತ ನಗರದಲ್ಲಿ ತ್ಯಾಜ್ಯ ಹೆಚ್ಚಳವಾಗಿದೆ.ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿದಿನ 5 ಸಾವಿರ ಟನ್​ ತ್ಯಾಜ್ಯ ಉತ್ಪಾದನೆಯಾಗುವ ಪೈಕಿ 3,500 ಟನ್​ಗೂ ಅಧಿಕ ಹಸಿ ಕಸ ಇರುತ್ತದೆ. ಹಬ್ಬ ಹಿನ್ನೆಲೆಯಲ್ಲಿ ಅಂದಾಜು 500 ಟನ್​ಗೂ ಹೆಚ್ಚಿನ ಬಾಳೆ ಕಂದು, ಮಾವಿನ ಎಲೆ, ಹೂವು, ಹಣ್ಣು, ತರಕಾರಿಗಳು ಸೇರಿ ಇತ್ಯಾದಿ ವಸ್ತುಗಳ ಕಸ ಉತ್ಪಾದನೆಯಾಗಿದೆ.

ಹಬ್ಬದ ದಿನಗಳಲ್ಲಿ ಉತ್ಪತ್ತಿಯಾಗುವ ನತ್ಯಾಜ್ಯ ನಿರ್ವಹಣೆಗೆ ಮಾರ್ಗಸೂಚಿ ಹೊರಡಿಸಿದ್ದ ಬಿಬಿಎಂಪಿ, ವಿಲೇವಾರಿಗೆ ಕೆಲ ಕ್ರಮ ಅನುಸರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿತ್ತು. ಬಾಳೆಕಂದು, ಮಾವಿನ ಎಲೆ, ಹೂವು ಸೇರಿದಂತೆ ಇತರೆ ಹಬ್ಬದ ವಸ್ತುಗಳ ಮಾರಾಟ ಮಾಡುವ ವ್ಯಾಪಾರಿಗಳಿಗೆ ಹಸಿ ಮತ್ತು ಒಣ ತ್ಯಾಜ್ಯ ವಿಂಗಡಿಸಬೇಕೆಂದು ಸೂಚಿಸಿತ್ತು. ಮಾರುಕಟ್ಟೆಗಳು ಸೇರಿ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಹಬ್ಬದ ಸಾಮಾನುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳು ಏಕ ಬಳಕೆ ಪ್ಲಾಸ್ಟಿಕ್​ ಬಳಸದಂತೆ ನಿಗಾವಹಿಸಲು ವಾರ್ಡ್​ಗಳಲ್ಲಿ ನತ್ಯಾಜ್ಯ ಆರೋಗ್ಯ ಅಧಿಕಾರಿಗಳ, ಮಾರ್ಷಲ್​ಗಳು ತಂಡ ರಚಿಸಿಕೊಂಡು ಪರಿವೀಣೆ ನಡೆಸಿ ಪ್ಲಾಸ್ಟಿಕ್​ ಮಾರಾಟ, ಬಳಕೆದಾರರಿಗೆ ದಂಡ ವಿಧಿಸುವಂತೆ ಹೇಳಿತ್ತು. ಆದರೆ, ಕೆ.ಆರ್​.ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರ, ಬಸವನಗುಡಿ, ಮಡಿವಾಳ ಸೇರಿ ವಿವಿಧ ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳು ತಂದಿದ್ದ ಬಾಳೆಕಂದು, ಹೂವು, ಹಣ್ಣು, ಮಾವಿನ ಸೋಪ್ಪು ರಾಶಿಯೇ ಬಿದ್ದಿದೆ.

ಬಿದ್ದಿರುವ ಕಸವನ್ನು ಹಸುಗಳು ಸೇರಿ ಇತರೆ ಪ್ರಾಣಿಗಳು ಓಡಾಡುತ್ತಿದ್ದವು. ಹಾಳಾದ ಬಾಳೆಕಂದು, ಕೊಳೆತ ಹಣ್ಣಗಳನ್ನು ಜಾನುವಾರುಗಳು ತಿನ್ನುತ್ತಿರುವ ದೃಶ್ಯ ಕಂಡುಬಂತು. ಬ್ಲಾಕ್​ಸ್ಪಾಟ್​(ಕಸ ಸುರಿಯುವ ಸ್ಥಳ)ಗಳಲ್ಲಿ, ರಸ್ತೆ ಬದಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಸವನ್ನು ಬಿಸಾಡಿರುವುದು ಅಲ್ಲೆಲ್ಲಿ ಕಂಡುಬಂದಿದೆ. ಹಬ್ಬ ಇರುವುದರಿಂದ ಹಸಿ ತ್ಯಾಜ್ಯ ಉತ್ಪಾದನೆ ಪ್ರಮಾಣದಲ್ಲಿ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಕಳೆದೆರಡು ದಿನಗಳಿಂದ ನಗರದಲ್ಲಿ ಮಳೆಯ ಪ್ರಮಾಣ ಹೆಚ್ಚಿರುವ ಕಾರಣ ತ್ಯಾಜ್ಯ ಸಂಗ್ರಹದಲ್ಲೂ ವ್ಯತ್ಯಯವಾಗಿದೆ. ತ್ಯಾಜ್ಯ ನಿರ್ವಹಣೆಗೆ ಗುತ್ತಿಗೆದಾರರ ಬಳಿ ಕೆಲಸ ಮಾಡುವ ಪೌರಕಾರ್ಮಿಕರಲ್ಲಿ ಬಹುತೇಕರು ಹಬ್ಬಕ್ಕೆ ರಜೆಯಲ್ಲಿದ್ದಾರೆ. ಸೋಮವಾರದೊಳಗೆ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಾರ್ಗಸೂಚಿಗಳೇನು?

* ದಸರಾ, ದೀಪಾವಳಿ ಹಬ್ಬದ ಪ್ರಯುಕ್ತ ಉತ್ಪತ್ತಿಯಾಗುವ ಹೆಚ್ಚುವರಿ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿಗೆ ಕ್ರಮ

* ಬ್ಲಾಕ್​ಸ್ಪಾಟ್​(ಕಸ ಸುರಿಯುವ ಸ್ಥಳ)ಗಳಲ್ಲಿ ತ್ಯಾಜ್ಯ ಶೇಖರಣೆಗೊಂಡು ಸಾರ್ವಜನಿಕರಿಗೆ ತೊಂದರೆಯಾಗದಂತೆ ವಿಶೇಷ ಗಮನ ಹರಿಸಬೇಕು.

* ಮಾರುಕಟ್ಟೆಗಳು ಸೇರಿ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಾಣವಾಗುವ ಬ್ಲಾಕ್​ಸ್ಪಾಟ್​ಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು

* ಮಾರುಕಟ್ಟೆಗಳು ಸೇರಿ ಇತರೆ ಪ್ರದೇಶಗಳಲ್ಲಿ ಬಾಳೆಕಂದು, ಮಾವಿನ ಎಲೆ, ಹೂವು, ಹಸಿ ತ್ಯಾಜ್ಯವನ್ನು ಆದ್ಯತೆ ಮೇರೆಗೆ ವಾರ್ಡ್​ಗಳಲ್ಲಿಯೇ ಹಸಿ, ತೋಟಗಾರಿಕೆ ತ್ಯಾಜ್ಯ ಸಂಸ್ಕರಣಾ ಸೌಲಭ್ಯ ಕಲ್ಪಿಸಿಕೊಂಡು ವಿಲೇವಾರಿ ಮಾಡಬೇಕು.

* ವಾರ್ಡ್​ಗಳಲ್ಲಿ ವಿಕೇಂದ್ರೀಕೃತ ಹಸಿ ತ್ಯಾಜ್ಯ ಸಂಸ್ಕರಣಾ ಟಕಗಳಿದ್ದಲ್ಲಿ ಅಲ್ಲಿಗೆ ವಿಲೇವಾರಿ ಮಾಡಬೇಕು

* ಹಸಿರು ತ್ಯಾಜ್ಯವನ್ನು ಹಸಿತ್ಯಾಜ್ಯ ಸಂಸ್ಕರಣಾ ಘಟಕಗಳಲ್ಲಿ ಇರುವ ಶೆಡ್ಡರ್ಸ್​ಗಳಿಗೆ ವಿಲೇವಾರಿ ಮಾಡುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net