ಸಾಮಾನ್ಯ ಸಭೆ ಮುಂದೂಡಿಕೆ

mkg1b
Published on


ಚನ್ನಗಿರಿ: ಮಹರ್ಷಿ ವಾಲ್ಮೀಕಿ ಪುತ್ಥಳಿ ತೆರವು ಸಂಬಂಧ ನಿಷೇಧಾಜ್ಞೆ ಜಾರಿ ಇರುವ ಹಿನ್ನೆಲೆಯಲ್ಲಿ ಪುರಸಭೆ ಸಭಾಂಗಣದಲ್ಲಿ ಬುಧವಾರ ಕರೆದಿದ್ದ ಸಾಮಾನ್ಯ ಸಭೆಯನ್ನು ಮುಂದೂಡಲಾಯಿತು.

ವಾಲ್ಮೀಕಿ ಪ್ರತಿಮೆ ತೆರವುಗೊಳಿಸಿದ ಹಿನ್ನ್ನೆಲೆಯಲ್ಲಿ ಇಂದಿನ ಸಭೆಯಲ್ಲಿ ಪ್ರತಿಮೆ ಅನಾವರಣ ಮಾಡುವ ಸಂಬಂಧ ಅನುಮೋದನೆ ಪಡೆಯಲು ಕಚೇರಿಯ ಮುಂದೆ ನೂರಾರು ಜನರು ಜಮಾಯಿಸಿದ್ದರು.

ಈ ಸಂದರ್ಭದಲ್ಲಿ ಸಭೆಯಲ್ಲಿ ಮುಖ್ಯಾಧಿಕಾರಿ ಆರಾಧ್ಯ ಮಾತನಾಡಿ, ನಿಷೇಧಾಜ್ಞೆ ಜಾರಿಯಲ್ಲಿರುವ ಕಾರಣ ಯಾರೂ ಗುಂಪಾಗಿ ಸೇರುವಂತಿಲ್ಲ. ಆದ್ದರಿಂದ ಸಭೆ ಮುಂದೂಡಲಾಗಿದ್ದು, ಮುಂದಿನ ದಿನಾಂಕ ತಿಳಿಸಲಾಗುವುದೆಂದು ಸಭೆಗೆ ತಿಳಿಸಿದರು.

ಸದಸ್ಯ ಅಮೀರ್ ಅಹ್ಮದ್, ಪಟ್ಲಿ ನಾಗರಾಜ್ ಮಾತನಾಡಿ, ಈಗಾಗಲೇ ಬೇರೆಬೇರೆ ಕಾರಣಗಳಿಗಾಗಿ ಸಭೆಯನ್ನು ಮೂರು ಬಾರಿ ಮುಂದೂಡಲಾಗಿದೆ. ಪಟ್ಟಣದಲ್ಲಿ ಸಮಸ್ಯೆಗಳು ಹೆಚ್ಚಾಗಿವೆ. ಅಭಿವೃದ್ಧಿ, ಸ್ವಚ್ಛತೆ, ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಆದ್ದರಿಂದ ಸಭೆ ನಡೆಸಬೇಕೆಂದು ಪಟ್ಟು ಹಿಡಿದರು.

ಆದರೆ, ಅಧಿಕಾರಿಗಳು ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಸಭೆ ನಡೆಸಲು ಸಾಧ್ಯವಿಲ್ಲ ಎಂದು ಸಭಾಂಗಣದಿಂದ ಹೊರನಡೆದರು.

ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಜರೀನಾಬಿ ಹಾಗೂ ಎಲ್ಲ ಸದಸ್ಯರು ಹಾಜರಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net