ಲೋಕಸಭೆ ಚುನಾವಣೆ ಹಿನ್ನೆಲೆ, ಏ.26ಕ್ಕೆ ರಾಹುಲ್ ಗಾಂಧಿ ಪ್ರಚಾರ

MINISTER MBP PRESS MEET
ವಿಜಯಪುರ ಕಾಂಗ್ರೆಸ್ ಕಚೇರಿಯಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಲಾಯಿತು. ಸಚಿವರಾದ ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ, ಶಾಸಕ ಯಶವಂತರಾಯಗೌಡ ಪಾಟೀಲ ಮತ್ತಿತರರಿದ್ದಾರೆ.
Published on

ವಿಜಯಪುರ: ಲೋಕಸಭೆ ಚುನಾವಣೆ ಹಿನ್ನೆಲೆ ಏ. 26 ರಂದು ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರು ಜಿಲ್ಲೆಗೆ ಆಗಮಿಸಿ ಪ್ರಚಾರ ನಡೆಸಲಿದ್ದಾರೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

ಅಂದು ಬೆಳಗ್ಗೆ 11 ಕ್ಕೆ ಬಿಎಲ್ ಡಿಇ ಸಂಸ್ಥೆಯ ಬೃಹತ್ ಮೈದಾನದಲ್ಲಿ ಸಭೆ ನಡೆಯಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹಿತ ಅನೇಕ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಕಾಂಗ್ರೆಸ್ ಈಗಾಗಲೇ ಪ್ರಣಾಳಿಕೆ ಬಿಡುಗಡೆ ಮಾಡಿದೆ. ರಾಜ್ಯ ವಿಧಾನ ಸಭೆ ಚುನಾವಣೆ ಸಂದರ್ಭ ನೀಡಿದ ಐದು ಗ್ಯಾರಂಟಿ ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ಈ ಹಿಂದೆ 2013-18 ರ ಅವಧಿಯಲ್ಲೂ ನೀಡಿದ ಭರವಸೆಗಳನ್ನು ಈಡೇರಿಸಿದ್ದಲ್ಲದೇ ಹೆಚ್ಚುವರಿ ಭರವಸೆ ಕೂಡ ಈಡೇರಿಸಲಾಗಿದೆ. ಇದೀಗ ಲೋಕಸಭೆ ಚುನಾವಣೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಲಾಗುವುದು. ಮತ್ತು ಈ ವಿಷಯದಲ್ಲಿ ಜನರಿಗೂ ಭರವಸೆ ಇದೆ ಎಂದರು.

ರೈತರ ಸಾಲಮನ್ನಾ, ರೈತರಿಗೆ ಬೆಳೆಗೆ ಯೋಗ್ಯ ದರ ನಿಗದಿಗೊಳಿಸುವ ನಿಟ್ಟಿನಲ್ಲಿ ಎಂಎಸ್‌ಪಿ ಜಾರಿ, ಮಹಿಳೆಯರಿಗೆ ಮತ್ತು ಯುವಕರಿಗೆ ಒಂದು ಲಕ್ಷ ರೂಪಾಯಿ, ಜಾತಿ ಗಣತಿ, ಪ್ರತಿ ವರ್ಷ 30 ಲಕ್ಷ ಉದ್ಯೋಗ ಸೃಷ್ಠಿ, ನರೇಗಾ ಕೂಲಿ ದರ ಹೆಚ್ಚಳ ಹೀಗೆ ಅನೇಕ ಭರವಸೆ ನೀಡಲಾಗಿದ್ದು, ಅಧಿಕಾರಕ್ಕೆ ಬರುತ್ತಿದ್ದಂತೆ ಈ ಎಲ್ಲ ಭರವಸೆ ಈಡೇರಿಸಲಾಗುವುದು ಎಂದರು.

ಈಡೇರದ ಬಿಜೆಪಿ ಭರವಸೆ

ಬಿಜೆಪಿ ಅವಧಿಯಲ್ಲಿ ಬೆಲೆ ಏರಿಕೆ ಮುಗಿಲು ಮುಟ್ಟಿದೆ. ಅಡುಗೆ ಅನಿಲ ದರ ಹೆಚ್ಚಳ ಆಗಿದೆ. ಪೆಟ್ರೋಲ್-ಡಿಸೇಲ್ ಬೆಲೆ ಏರಿದೆ, ರೂಪಾಯಿ ಮೌಲ್ಯ ಕುಸಿದಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಠಿ ಆಗಲೇ ಇಲ್ಲ. ನೋಟ್ ಬ್ಯಾನ್ ಮೂಲಕ ಜನರಿಗೆ ತೊಂದರೆ ನೀಡಿದರು. ಕಪ್ಪು ಹಣ ಹೊರಗೆ ಬರಲೇ ಇಲ್ಲ. ರೈತರ ಆದಾಯ ದ್ವಿಗುಣ ಆಗಲೇ ಇಲ್ಲ. ಅಚ್ಚೇ ದಿನ್ ಬರಲೇ ಇಲ್ಲ. ನ ಖಾವೂಂಗಾ ನಾ ಖಾನೇ ದೂಂಗಾ ಎಂದವರು ಭ್ರಷ್ಟಾಚಾರ ಮಾಡಿದರು. ಚುನಾವಣೆ ಬಾಂಡ್ ಬಿಜೆಪಿ ಭ್ರಷ್ಟಾಚಾರಕ್ಕೆ ಸಾಕ್ಷಿ. ಸಿಬಿಐ, ಐಟಿ, ಈಡಿ ಮೂಲಕ ಹೆದರಿಸಿ 7600 ಕೋಟಿ ದೇಣಿಗೆ ಸಂಗ್ರಹಿಸಿದೆ. ಆ ಮೂಲಕ ಮೋದಿ ಅವರ ಮುಖವಾಡ ಕಳಚಿದೆ. ಹೀಗಾಗಿ ಜನ ಕಾಂಗ್ರೆಸ್ ಬಗ್ಗೆ ಒಲವು ತೋರುತ್ತಿದ್ದಾರೆ ಎಂದರು.

ಸಂಸದರ ವೈಫಲ್ಯ

ಕೃಷ್ಣಾ ನ್ಯಾಯಾಧೀಕರಣದ ತೀರ್ಪು ಬಂದರೂ ಈವರೆಗೂ ಗ್ಯಾಜೆಟ್ ನೋಟಿಫಿಕೇಶನ್ ಆಗಿಲ್ಲ. ಈ ಬಗ್ಗೆ ಸಂಸದ ರಮೇಶ ಜಿಗಜಿಣಗಿ ಸಂಸತ್‌ನಲ್ಲಿ ಧ್ವನಿ ಎತ್ತಿಲ್ಲ. ಬರ ನಿರ್ವಹಣೆ ಬಗ್ಗೆ ಮಾತನಾಡಿಲ್ಲ, ಪ್ರವಾಸೋದ್ಯಮ ಉತ್ತೇಜನಕ್ಕೆ ಶ್ರಮಿಸಿಲ್ಲ, ವಂದೇ ಭಾರತ ರೈಲು ಸೇವೆ ಜಿಲ್ಲೆಗೆ ಒದಗಿಸಿಲ್ಲ, ತೋಟಗಾರಿಕೆ ಬೆಳೆಗೆ ಹೆಸರಾದ ಜಿಲ್ಲೆಯ ರೈತರ ಏಳಿಗೆಗೆ ಯಾವುದೇ ಯೋಜನೆ ತಂದಿಲ್ಲ, ಸಂಸತ್‌ನಲ್ಲಿ ಒಂದೇ ಒಂದು ಪ್ರಶ್ನೆ ಕೇಳಿಲ್ಲ. ಹೀಗಾಗಿ ಜನ ರಾಜು ಆಲಗೂರ ಪರ ಒಲವು ಹೊಂದಿದ್ದಾರೆ ಎಂದರು.
ಶಾಸಕರಾದ ವಿಠಲ ಕಟಕದೊಂಡ, ಅಶೋಕ ಮನಗೂಳಿ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಅಭ್ಯರ್ಥಿ ರಾಜು ಆಲಗೂರ, ವಿಪ ಸದಸ್ಯ ಪ್ರಕಾಶ ರಾಠೋಡ, ಕಾಂತಾ ನಾಯಕ, ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ಡಾ.ಮಕ್ಬುಲ್ ಬಾಗವಾನ, ಮುಖಂಡರಾದ ಎಸ್.ಎಂ. ಪಾಟೀಲ ಗಣಿಹಾರ, ಅರ್ಜುನ ಲಮಾಣಿ, ಎಐಸಿಸಿ ಉಸ್ತುವಾರಿ ಸೈಯ್ಯದ್, ಅಬ್ದುಲ್‌ಹಮೀದ್ ಮುಶ್ರೀಫ್, ಸಂಗಮೇಶ ಬಬಲೇಶ್ವರ ಮತ್ತಿತರರಿದ್ದರು. ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net