

ಶಿರಸಿ: ಕಳೆದೊಂದು ವಾರದ ಮಳೆಯಿಂದಾಗಿ ತಾಲೂಕಿನ ಬಚಗಾಂವ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡಕ್ಕೆ ಧಕ್ಕೆಯಾಗಿದೆ. 7 ಕೊಠಡಿಗಳ ಪೈಕಿ 5 ಕೊಠಡಿಗಳ ಗೋಡೆಯಲ್ಲಿ ಬಿರುಕು ಬಂದಿದ್ದು, ಕಟ್ಟಡ ಕುಸಿಯುವ ಆತಂಕ ಉಂಟಾಗಿದೆ.
ಸುಮಾರು 70 ವರ್ಷಗಳಷ್ಟು ಹಳೆಯದಾದ ಈ ಶಾಲೆಯಲ್ಲಿ 5 ಕೊಠಡಿಗಳಿದ್ದವು. ಕೆಲ ವರ್ಷಗಳ ಹಿಂದೆ ಸರ್ವಶಿಕ್ಷಾ ಅಭಿಯಾನದ ಅಡಿಯಲ್ಲಿ ಎರಡು ಹೊಸ ಕೊಠಡಿ ನಿರ್ಮಿಸಲಾಗಿತ್ತು. ಕಳೆದ ನಾಲ್ಕು ದಿನಗಳ ಹಿಂದೆ ಸುರಿದ ಭಾರಿ ಮಳೆ ಮತ್ತು ಗಾಳಿಯಿಂದಾಗಿ ಹಳೆಯ ಕೊಠಡಿಗಳ ಗೋಡೆಗಳಲ್ಲಿ ಬಿರುಕು ಮೂಡಿದೆ. ಸುದ್ದಿ ತಿಳಿಯುತ್ತಿದ್ದಂತೆ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ ಹಾಗೂ ಡಿಡಿಪಿಐ ಪಿ. ಬಸವರಾಜು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಳೆಯ ಕೊಠಡಿಗಳು ಸುರಕ್ಷಿತವಲ್ಲದ ಕಾರಣ ಸರ್ವಶಿಕ್ಷಾ ಅಭಿಯಾನದಲ್ಲಿ ನಿರ್ಮಿಸಲಾದ ಎರಡು ಕೊಠಡಿಗಳಲ್ಲಿಯೇ ಎಲ್ಲ ವಿದ್ಯಾರ್ಥಿಗಳಿಗೂ ಪಾಠ ಮಾಡುವಂತೆ ಸೂಚಿಸಿದ್ದಾರೆ.
ಶಾಲೆಯಲ್ಲಿ ಒಟ್ಟೂ 66 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ವಾರ ತಾಲೂಕಿನ ಭಾಶಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೂ ಇದೇ ರೀತಿ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಪರಿಶೀಲನೆ ನಡೆಸಿದ್ದ ಶಿಕ್ಷಣ ಇಲಾಖೆ ಮಳೆಗಾಲ ಮುಕ್ತಾಯವಾಗುವವರೆಗೂ ಇಲ್ಲಿಯ ದೇವಸ್ಥಾನದಲ್ಲಿ ಮಕ್ಕಳಿಗೆ ಪಾಠ ಮಾಡುವಂತೆ ಸೂಚಿಸಿದೆ. ಆದರೆ, ಬಚಗಾಂವ್ ನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಇರುವ ಕಾರಣ ಸಮಸ್ಯೆ ಉಂಟಾಗಿದೆ.
ಮಳೆ ಹಾನಿ
ತಾಲೂಕಿನಲ್ಲಿ ಭಾನುವಾರ ಮಳೆಯ ಪ್ರಮಾಣ ಸ್ವಲ್ಪ ತಗ್ಗಿದೆ. ಇಲ್ಲಿಯ ಬೈಲಗದ್ದೆಯ ಪಾರ್ವತಿ ಈಶ್ವರ ಗೌಡ ಅವರ ಮನೆಯ ಹಿಂದಿನ ಗೋಡೆ ಕುಸಿದು 10 ಸಾವಿರ ರೂ. ಹಾನಿ ಸಂಭವಿಸಿದೆ. ಇಟಗುಳಿಯ ರಾಮಚಂದ್ರ ಹೆಗಡೆ ನೀರ್ನಳ್ಳಿ ಅವರಿಗೆ ಸೇರಿದ ದನದ ಕೊಟ್ಟಿಗೆ ಕುಸಿತವಾಗಿ 50 ಸಾವಿರ ರೂ. ಹಾನಿಯಾಗಿದೆ.