

ಬೆಳ್ತಂಗಡಿ: ತಾಲೂಕಿನ ಕಡಿರುದ್ಯಾವರ ಗ್ರಾಮದಲ್ಲಿ ತೋಟಕ್ಕೆ ಲಗ್ಗೆಯಿಟ್ಟ ಕಾಡಾನೆಗಳ ಹಿಂಡಿನಿಂದ ಮೂರು ತಿಂಗಳ ಮರಿ ಬೇರ್ಪಟ್ಟಿದ್ದು, ಅದನ್ನು ಮರಳಿ ತಾಯಿಯೊಂದಿಗೆ ಸೇರಿಸುವ ಅರಣ್ಯ ಇಲಾಖೆ ಪ್ರಯತ್ನ ಮುಂದುವರಿದಿದೆ.
ಕುಚ್ಚೂರು ಎಂಬಲ್ಲಿನ ರಾಜೇಂದ್ರ ಗೌಡ ಹಾಗೂ ರವೀಂದ್ರ ಗೌಡ ಎಂಬುವರ ತೋಟಗಳಿಗೆ ಗುರುವಾರ ರಾತ್ರಿ ಕಾಡಾನೆಗಳು ನುಗ್ಗಿ ಭಾರಿ ಪ್ರಮಾಣದಲ್ಲಿ ಕೃಷಿಗೆ ಹಾನಿ ಮಾಡಿದ್ದವು. ಶುಕ್ರವಾರ ಬೆಳಗ್ಗೆ ರಾಜೇಂದ್ರ ಗೌಡ ತೋಟಕ್ಕೆ ಹೋದಾಗ ಐದು ಆನೆಗಳು ಮತ್ತು ಒಂದು ಮರಿಯಾನೆ ಕಂಡುಬಂದಿದ್ದು, ಇವರನ್ನು ಕಂಡ ಆನೆಗಳ ಹಿಂಡು ಮರಿಯನ್ನು ತೋಟದಲ್ಲೇ ಬಿಟ್ಟು ಕಾಡಿನತ್ತ ಓಡಿವೆ.
ತಾಯಿಯತ್ತ ಸೇರಿಸುವ ಯತ್ನ: ತೋಟದಲ್ಲೇ ಬಾಕಿಯಾದ ಮರಿಯಾನೆಯನ್ನು ಮರಳಿ ಕಾಡಿಗೆ ಸೇರಿಸುವ ಪ್ರಯತ್ನ ಸ್ಥಳೀಯರ ಸಹಕಾರದೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿಯಿಂದ ನಡೆಯುತ್ತಿದೆ. ಒಮ್ಮೆ ಕಾಡಿನತ್ತ ಬಿಟ್ಟರೂ ಮರಿ ಮತ್ತೆ ತೋಟದಲ್ಲೇ ಆಶ್ರಯ ಪಡೆದಿದೆ. ಆನೆ ಮರಿಯ ವಿಡಿಯೋ ವೈರಲ್ ಆಗಿದ್ದರಿಂದ ಕುತೂಹಲಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು, ಕಾರ್ಯಾಚರಣೆಗೂ ಅಡ್ಡಿಯಾಯಿತು.
ಸ್ಥಳೀಯರು ಹಗ್ಗದ ಮೂಲಕ ಮರಿಯನ್ನು ಹಿಡಿದು ಮೇಲಕ್ಕೆತ್ತಲು ಪ್ರಯತ್ನಿಸಿದ್ದರು. ಮರಿಗೆ ಗಾಯಗಳಾಗದಂತೆ ನೋಡಿಕೊಳ್ಳಬೇಕು, ಅದು ಮತ್ತೆ ಆನೆಗಳ ಗುಂಪಿನ ಜತೆ ಹೋಗುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಅರಣ್ಯ ಇಲಾಖೆಯವರು ಸ್ಥಳೀಯರಿಗೆ ಮನವರಿಕೆ ಮಾಡಿದ್ದಾರೆ.
ವಲಯ ಅರಣ್ಯಾಧಿಕಾರಿ ತ್ಯಾಗರಾಜ್, ವೇಣೂರು ವಿಭಾಗದ ಮಹಿಮ್, ವನ್ಯಜೀವಿ ವಿಭಾಗದ ಶಿವ ಕುಮಾರ್, ಉಪವಲಯ ಅರಣ್ಯಾಧಿಕಾರಿ ಯತೀಂದ್ರ, ಅರಣ್ಯ ರಕ್ಷಕರಾದ ರಾಜೇಶ್ ಗಾಡಿಗ, ಪಾಂಡುರಂಗ ಕಮತಿ ಮೊದಲಾದವರು, ಸ್ಥಳೀಯರ ಸಹಕಾರದಲ್ಲಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಅಡಕೆ, ತೆಂಗು, ಬಾಳೆಗಿಡ ನಾಶ: ಎರಡು ಎಕರೆ ಜಾಗದಲ್ಲಿ 200ಕ್ಕಿಂತ ಅಧಿಕ ಫಸಲು ಬರುವ ಅಡಕೆ ಮರ, 100ಕ್ಕಿಂತ ಅಧಿಕ ಫಲ ಬಿಟ್ಟ ಬಾಳೆಗಿಡ, 10ರಷ್ಟು ತೆಂಗಿನ ಮರಗಳನ್ನು ಆನೆಗಳು ನಾಶ ಮಾಡಿವೆ. ‘ಹಲವಾರು ವರ್ಷಗಳಿಂದ ಆನೆಗಳು ಬರುತ್ತಿವೆ. ಆದರೆ ಈ ರೀತಿ ದೊಡ್ಡ ಮಟ್ಟದಲ್ಲಿ ಹಾನಿ ಮಾಡಿರಲಿಲ್ಲ. ನಾವು ಕಷ್ಟಪಟ್ಟು ಕೃಷಿ ಮಾಡುತ್ತಿದ್ದೇವೆ. ಈಗ ಆದ ಹಾನಿಗೆ ಸರ್ಕಾರ ನಮಗೆ ಪರಿಹಾರ ನೀಡಬೇಕು. ಮುಂದೆ ಆನೆಗಳು ದಾಳಿಯಾಗದಂತೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು’ ಎಂದು ತೋಟದ ಮಾಲೀಕ ರಾಜೇಂದ್ರ ಗೌಡ ಒತ್ತಾಯಿಸಿದ್ದಾರೆ. ಕೆಲವು ದಿನಗಳಿಂದ ಇಲ್ಲಿ ಒಂಟಿ ಸಲಗ ಹಲವು ಬಾರಿ ಕಂಡುಬಂದಿದ್ದರೂ, ಹೆಚ್ಚಿನ ಹಾನಿ ಮಾಡಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ನಾಲ್ಕು ದಿನಗಳ ಹಿಂದೆ ಚಾರ್ಮಾಡಿ- ಕನಪ್ಪಾಡಿ ಮೀಸಲು ಅರಣ್ಯ ಭಾಗದ ಚಿಬಿದ್ರೆ ಪ್ರದೇಶದಲ್ಲಿ ಕಂಡುಬಂದಿದ್ದ ಕಾಡಾನೆಗಳ ಹಿಂಡು ಇಲ್ಲಿನ ಕೆಳಭಾಗದ ಕಡಿರುದ್ಯಾವರ ಭಾಗಕ್ಕೆ ದಾಳಿ ಇಟ್ಟಿರಬಹುದೆಂದು ಅರಣ್ಯ ಇಲಾಖೆ ತಿಳಿಸಿದೆ. ಸಮೀಪದ ಹಿತ್ತಿಲಕೋಡಿ, ವಳಂಬ್ರ ಪರಿಸರದಲ್ಲೂ ಕಾಡಾನೆಗಳು ಕಂಡುಬಂದಿದ್ದವು.
ತಾಯಿಗಾಗಿ ಹುಡುಕಾಟ
ಕುಟುಂಬದಿಂದ ಬೇರ್ಪಟ್ಟಿರುವ ಮರಿಯಾನೆ ಬೆಳಗ್ಗಿನಿಂದ ಘೀಳಿಡುತ್ತಿದೆ. ತೋಟದಲ್ಲಿ ಅತ್ತಿಂದಿತ್ತ ಸುತ್ತಾಡುತ್ತಿದ್ದು, ತಾಯಿಯನ್ನು ಅರಸುತ್ತಿರುವುದು ಎಂಥವರ ಮನಸ್ಸನ್ನೂ ಕರಗಿಸುವಂತಿದೆ. ಇತರ ಆಹಾರ ನೀಡುವಂತಿಲ್ಲ, ಹೀಗಾಗಿ ಸಾಯಂಕಾಲದವರೆಗೆ ಮರಿಯನ್ನು ಒಂಟಿಯಾಗಿರಲು ಅರಣ್ಯ ಇಲಾಖೆ ವ್ಯವಸ್ಥೆ ಮಾಡಿದೆ. ರಾತ್ರಿಯಾಗುತ್ತಿದ್ದಂತೆ ತಾಯಿ ಬಂದು ಮರಿಯನ್ನು ಕರೆದುಕೊಂಡು ಹೋಗಬಹುದು ಎಂಬುದು ಅಧಿಕಾರಿಗಳ ನಿರೀಕ್ಷೆ.
ಮರಿಯಾನೆ ಗುಂಪನ್ನು ಸೇರದಿದ್ದರೆ ಮತ್ತೆ ಕಾಡಾನೆಗಳು ಲಗ್ಗೆ ಇಡುವ ಸಾಧ್ಯತೆ ಇದೆ. ಗುಂಪಿನಿಂದ ಪ್ರತ್ಯೇಕಗೊಂಡು ಒಂದಿಷ್ಟು ನಿತ್ರಾಣವಾಗಿರುವ ಮರಿಯಾನೆಯನ್ನು ರಕ್ಷಿಸಿ ಮತ್ತೆ ಕಾಡಿನಲ್ಲಿರುವ ಆನೆಗಳ ಗುಂಪಿನ ಜತೆ ಸೇರಿಸುವ ಪ್ರಯತ್ನ ಸ್ಥಳೀಯರ ಸಹಕಾರದಲ್ಲಿ ಇಲಾಖೆ ವತಿಯಿಂದ ಮಾಡಲಾಗಿದೆ.
- ತ್ಯಾಗರಾಜ್, ವಲಯ ಅರಣ್ಯಾಧಿಕಾರಿ, ಬೆಳ್ತಂಗಡಿ