ಡಿಎನ್‌ಎ ವರದಿ ಬರುವ ಮುನ್ನವೇ ಮಗು ಸಾವು

crime
Published on

ಮಂಗಳೂರು: ಕರಾವಳಿಯಲ್ಲಿ ಚರ್ಚೆಗೆ ಗ್ರಾಸವಾಗಿದ್ದ, ಲೇಡಿಗೋಷನ್ ಆಸ್ಪತ್ರೆಯಲ್ಲಿ ನಡೆದಿದೆ ಎಂದು ಆರೋಪಿಸಲಾಗಿರುವ ಮಗು ಬದಲಾವಣೆ ಪ್ರಕರಣಕ್ಕೆ ಸಂಬಂಧಿಸಿ ಡಿಎನ್‌ಎ ವರದಿ ಬರುವ ಮೊದಲೇ ಮಗು ಮೃತಪಟ್ಟಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ 48 ದಿನಗಳಿಂದ ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮಗು ಸೋಮವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಮೃತಪಟ್ಟಿದೆ.

ಮಗುವಿನ ಆರೋಗ್ಯದ ಸ್ಥಿತಿಗತಿ ಕುರಿತಂತೆ ಪ್ರತಿ ದಿನವೂ ಹೆತ್ತವರಿಗೆ ಮಾಹಿತಿ ನೀಡಲಾಗುತ್ತಿತ್ತು. ಮಗು ಚಿಂತಾಜನಕ ಸ್ಥಿತಿಯಲ್ಲಿತ್ತು. ಆದರೂ ಉಳಿಸುವ ಎಲ್ಲ ಪ್ರಯತ್ನ ಮಾಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ ಎಂದು ಆಸ್ಪತ್ರೆ ಅಧೀಕ್ಷಕ ಡಾ.ದುರ್ಗಾ ಪ್ರಸಾದ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಕುಂದಾಪುರ ಮೂಲದ ಮುಸ್ತಾಫಾ ಎನ್ನುವವರ ಪತ್ನಿ ಸೆ.27ರಂದು ಲೇಡಿಗೋಷನ್‌ಗೆ ಹೆರಿಗೆಗೆಂದು ದಾಖಲಾಗಿದ್ದರು. ತಾಯಿಯ ಪರಿಸ್ಥಿತಿಯೂ ಆರೋಗ್ಯಕರವಾಗಿರ ಹಿನ್ನೆಲೆಯಲ್ಲಿ ಸಿಸೇರಿಯನ್ ಮಾಡಿ ಮಗುವನ್ನು ಹೊರತೆಗೆಯಲಾಗಿತ್ತು. ಈ ವೇಳೆ ವೈದ್ಯರು ಹೆಣ್ಣು ಮಗು ಎಂದು ತಿಳಿಸುವುದರೊಂದಿಗ ವರದಿಯಲ್ಲೂ ದಾಖಲಿಸಿದ್ದರು. ಮಗುವಿನ ಆರೋಗ್ಯದಲ್ಲಿ ಏರುಪೇರಾದ ಕಾರಣ, ಸುಮಾರು 18 ದಿನ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಮನೆಯವರು ಮಗುವನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಈ ವೇಳೆ ಅಲ್ಲಿನ ವೈದ್ಯರು ನೀಡಿದ ದಾಖಲೆಯಲ್ಲಿ ಗಂಡು ಮಗು ಎಂದು ದಾಖಲಿಸಿದ್ದಾರೆ. ಬಳಿಕ ಮಗುವನ್ನು ನೋಡಿದಾಗ ಗಂಡು ಎಂದು ತಿಳಿದು ಬಂದಿದೆ.

ಹಾಗಾಗಿ ಮಗುವನ್ನು ಬದಲಿಸಿದ್ದಾರೆ ಎಂದು ಹೆತ್ತವರು ಆರೋಪಿಸಿ, ಆಸ್ಪತ್ರೆ ವೈದ್ಯರ ವಿರುದ್ಧ ಬಂದರು ಠಾಣೆಯಲ್ಲಿ ದೂರು ನೀಡಿದ್ದರು. ಬಳಿಕ ಮಗುವನ್ನು ಮತ್ತೆ ಲೇಡಿಗೋಷನ್‌ನಲ್ಲಿ ಮತ್ತೆ ದಾಖಲಿಸಲಾಗಿತ್ತು. ಬಳಿಕ ನ್ಯಾಯಾಲಯದ ಆದೇಶದಂತೆ ಡಿಎನ್‌ಎ ಸ್ಯಾಂಪಲ್ ಪಡೆದು ಪ್ರಯೋಗಾಲಯಕ್ಕೂ ಕಳುಹಿಸಲಾಗಿದೆ. ಆದರೆ ವರದಿ ಬರುವ ಮೊದಲೇ ಮಗು ಮೃತಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net