

ಸುಂಟಿಕೊಪ್ಪ: ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯದಲ್ಲೇ ತುಂಬು ಗರ್ಭಿಣಿ ಮಗುವಿಗೆ ಜನ್ಮ ನೀಡಿದ್ದಾರೆ.
ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಡಕೊಲ್ಲಿ ಗ್ರಾಮದ ನಿವಾಸಿ ದಾಸ ಅವರ ಪತ್ನಿ ಲಕ್ಷ್ಮೀ ಅವರಿಗೆ ಭಾನುವಾರ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ಸಂದರ್ಭ ಆಕೆಯ ಮನೆಯವರು ಆಟೋ ಚಾಲಕದ ಮಾಜಿ ಅಧ್ಯಕ್ಷ ಸಿ.ಸಿ.ಸುನಿಲ್‌ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದೊಯ್ಯಲು ಹೇಳಿದ್ದಾರೆ. ಬಳಿಕ ಸುನಿಲ್ ಕಾಂಡನಕೊಲ್ಲಿಯಿಂದ ಗರ್ಭಿಣಿ ಹಾಗೂ ಮನೆಯವರನ್ನು ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವಾಗ ಹಟ್ಟಿಹೊಳೆ ಬಳಿ ಲಕ್ಷ್ಮೀ ಅವರಿಗೆ ತೀವ್ರ ತರಹದ ಪ್ರಸವ ವೇದನೆ ಕಾಣಿಸಿಕೊಂಡಿದ್ದು, ಆಟೋದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ನಂತರ ತಾಯಿ ಮತ್ತು ಮಗುವನ್ನು ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿ ಸಿಬ್ಬಂದಿ ಸಕಾಲಿಕದಲ್ಲಿ ತಾಯಿ, ಮಗುವಿಗೆ ಚಿಕಿತ್ಸೆ ನೀಡಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ.
ಸುಂಟಿಕೊಪ್ಪ ಆಟೋ ಚಾಲಕರ ಸಂಘದ ಅಧ್ಯಕ್ಷ ಶರೀಫ್ ಹಾಗೂ ಸದಸ್ಯರು ಸಿ.ಸಿ.ಸುನಿಲ್ ಅವರ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.