ಬಾಬೂಜಿ ಶೋಷಿತರ ಧ್ವನಿಯಾಗಿದ್ದ ಮಹನೀಯ

1002281238
Published on

ಶ್ರೀರಂಗಪಟ್ಟಣ:  ಬಡವರು, ಶೋಷಿತ ವರ್ಗದ ಧ್ವನಿಯಾಗಿ ಅವರಿಗೆ ನ್ಯಾಯದೊರಕಿಸಿಕೊಡಲು ಹೋರಾಡಿದ ಮಹಾನೀಯ ಡಾ.ಬಾಬು ಜಗಜೀವನ ರಾಮ್ ಎಂದು ಸೆಸ್ಕ್ ಅಧ್ಯಕ್ಷ ಎ.ಬಿ. ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಶನಿವಾರ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನ್ ರಾಂ ಅವರ 118ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ ಡಾ.ಬಾಬು ಜಗಜೀವನ್ ರಾಮ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸರ್ವಕಾಲಕ್ಕೂ ಸ್ಮರಿಸಿ ಗೌರವಿಸಬೇಕು. ಈ ಇಬ್ಬರು ಮಹಾನಾಯಕರು ಬಡತನ ರೇಖೆಗಿಂತಲೂ ಕೆಳವರ್ಗದಲ್ಲಿ ಹುಟ್ಟಿ, ಕಡು ಕಷ್ಟದ ಬದುಕನ್ನು ಮೆಟ್ಟಿ ಶಿಕ್ಷಣ ಪಡೆದು, ತಮ್ಮದೇ ಆದ ವಿಶೇಷ ವ್ಯಕ್ತಿತ್ವದಿಂದ ಭಾರತದ ಕಟ್ಟಕಡೆಯ ವ್ಯಕ್ತಿಯು ಸಾಮಾಜಿಕ ಶೋಷಣೆಗಳ ವಿರುದ್ಧ ಧ್ವನಿ ಎತ್ತಲು ಸಂವಿಧಾನಿಕ ಹಕ್ಕುಗಳನ್ನು ನೀಡಿದ ಮಹಾನೀಯರು ಎಂದರು.

ಬಾಬೂಜಿ ಹಾಕಿಕೊಟ್ಟ ಆದರ್ಶ ನೀತಿಗಳು ಮತ್ತು ಸೌಲಭ್ಯಗಳನ್ನು ಬಳಸಿಕೊಳ್ಳುವಲ್ಲಿ ನಾವು ಹಿಂದುಳಿದಿದ್ದೇವೆ. ಹಿಂದುಳಿದ ಸಮುದಾಯಗಳು ಸಮಾಜದ ಮುಖ್ಯವೇದಿಕೆಗೆ ಬರಲು ಶಿಕ್ಷಣ ಪ್ರಮುಖ ಸಾಧನವಾಗಿದ್ದು, ನಾವು ನಮ್ಮ ಮಕ್ಕಳಿಗೆ ಅಗತ್ಯ ಶಿಕ್ಷಣ ಕೊಡಿಸುವ ಮೂಲಕ ಸುಧಾರಿತ ಜೀವನದೊಂದಿಗೆ ಸುಸ್ಥಿರ ಆರ್ಥಿಕ ಬದಕುನ್ನು ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು.

ಪಟ್ಟಣದ ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬರ ಸ್ವರ್ಣ ಬಣ್ಣ ಲೇಪಿತ ಪುತ್ಥಳಿಗೆ ತಾಲೂಕು ಆಡಳಿತಾಧಿಕಾರಿಗಳು, ಸಮುದಾಯದ ಮುಖಂಡರ ಸಮ್ಮುಖದಲ್ಲಿ ಹೂ ಮಾಲೆ ಹಾಕಿದರು. ಡಾ.ಬಾಬು ಜಗಜೀವನ ರಾಂ ಭಾವಚಿತ್ರದ ರಥೋತ್ಸವಕ್ಕೆ ಶಾಸಕ ರಮೇಶ ಬಂಡಿಸಿದ್ದೇಗೌಡ ಚಾಲನೆ ನೀಡಿದರು. ಪಟ್ಟಣದ ಮುಖ್ಯರಸ್ತೆಯ ಮಾರ್ಗವಾಗಿ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದವರೆಗೂ ಮೆರವಣಿಗೆ ಸಾಗಿತು. ಜಾನಪದ ಕಲಾತಂಡಗಳ ನೃತ್ಯ ಹಾಗೂ ತಮಟೆ ವಾದ್ಯಗಳ ಪ್ರದರ್ಶನ ಮೇಳೈಸಿದವು.

ಕಾರ್ಯಕ್ರಮದಲ್ಲಿ ಪುರಸಭಾ ಉಪಾಧ್ಯಕ್ಷ ಎಂ.ಎಲ್.ದಿನೇಶ್, ಡಾ.ಬಾಬು ಜಗಜೀವನ್ ರಾಂ ಜನಜಾಗೃತಿ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಅರಕೆರೆ ಸಿದ್ದರಾಜು, ತಾಲೂಕು ಅಧ್ಯಕ್ಷ ಆಟೋ ಶಂಕರ್, ಸಂಘದ ಗೌರವ ಅಧ್ಯಕ್ಷ ಕೆ.ಟಿ.ರಂಗಯ್ಯ, ಪಿಕಾರ್ಡ್ ಬ್ಯಾಂಕ್ ಮಾಜಿ ನಿರ್ದೇಶಕ ಅರಕೆರೆ ಶಿವಯ್ಯ, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾಪಂ ಇಒ ವೇಣು, ಮುಖ್ಯಾಧಿಕಾರಿ ಎಂ.ರಾಜಣ್ಣ, ಸಮಾಜ ಕಲ್ಯಾಣಾಧಿಕಾರಿ ಮೇಘಾ, ತಾಲೂಕು ಕಲ್ಯಾಣಾಧಿಕಾರಿ ಜ್ಯೋತಿಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net