

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಬಾಬು ಜಗಜೀವನರಾಮ್ ಅವರು ನಮಗೆಲ್ಲರಿಗೂ ಮಾರ್ಗದರ್ಶಕರು, ಅವರ ಬದುಕು ನಮಗೆ ಪ್ರೇರಣೆಯಾಗಬೇಕು. ಅವರ ಮಾರ್ಗದಲ್ಲಿ ನಡೆಯುವ ಪ್ರಯತ್ನವೇ ನಾವು ಅವರಿಗೆ ಸಲ್ಲಿಸುವ ಗೌರವವಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಹೇಳಿದರು.
ದೇವನಹಳ್ಳಿಯ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಸಿರು ಕ್ರಾಂತಿಯ ಹರಿಕಾರ ಹಾಗೂ ಭಾರತದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಮ್ ಅವರ 118 ನೇ ಜಯಂತಿಯಲ್ಲಿ ಮಾತನಾಡಿದರು. ಆಡು ಮುಟ್ಟದ ಸೊಪ್ಪಿಲ್ಲ ಬಾಬೂಜಿ ನಿರ್ವಹಿಸದ ಖಾತೆಗಳಿಲ್ಲ ಎಂಬ ಮಾತೇ ಇದೆ. ಭಾರತದ ಉಪ ಪ್ರಧಾನಿಗಳಾಗಿ, ವಾರ್ತಾ ಮತ್ತು ಪ್ರಚಾರ, ಸಾರಿಗೆ, ರೈಲ್ವೆ, ಕಾರ್ಮಿಕ ಮತ್ತು ಪುನರ್ವಸತಿ, ಆಹಾರ, ಕೃಷಿ, ಸಹಕಾರ, ನೀರಾವರಿ ಇತ್ಯಾದಿ ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಬಾಬು ಜಗಜೀವನರಾಮ್ ಅವರು ವಿಶೇಷವಾಗಿ 1970-74ರಲ್ಲಿ ರಕ್ಷಣಾ ಸಚಿವರಾಗಿ ಅಮೋಘ ಸಾಧನೆ ಮಾಡಿದರು. ಅವರ ಕಾಯಕ ನಿಷ್ಠೆ ನಮ್ಮೆಲ್ಲರಿಗೂ ಪ್ರೇರಣೆ ಎಂದರು.
ಧೀಮಂತ ರಾಷ್ಟ್ರೀಯ ನಾಯಕ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ಎನ್.ಅನುರಾಧಾ ಮಾತನಾಡಿ ಡಾ.ಬಾಬು ಜಗಜೀವನ ರಾಮ್ ಅವರು ಧೀಮಂತ ರಾಷ್ಟ್ರೀಯ ನಾಯಕರಾಗಿದ್ದರು. ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯ ಹೋರಾಟಗಾರಾಗಿದ್ದರು ಎಂದು ಗುಣಗಾನ ಮಾಡಿದರು. ತಳಸಮುದಾಯದ ಜನರಿಗೆ ಸಂವಿಧಾನಬದ್ಧ ನ್ಯಾಯ ದೊರಕಿಸಲು ಹೋರಾಡಿದರು.ಅವರ ದಕ್ಷ ಆಡಳಿತದಿಂದ ನಮ್ಮ ಮುಂದೆ ಅವರು ಆದರ್ಶಪ್ರಾಯರಾಗಿದ್ದಾರೆ. ಕೃಷಿ ಸಚಿವರಾಗಿ ಅವರು ಮಾಡಿದ ವಿನೂತನ, ಅಮೋಘ ಸೇವೆಗೆ ದೇಶ ಅವರನ್ನು ’ಹಸಿರು ಕ್ರಾಂತಿಯ ಹರಿಕಾರ’ ಎಂದೇ ಕರೆಯಿತು. ಇಂದು ಭವಿಷ್ಯದ ಭಾರತಕ್ಕೆ ನಮ್ಮೆಲ್ಲರಿಗೂ ಆದರ್ಶರಾಗಿದ್ದಾರೆ ಎಂದು ಸ್ಮರಿಸಿದರು. ಮೊದಲ ಭಾರತೀಯ ಸಚಿವ ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿ ಅತ್ಯಂತ ಕಿರಿಯ ಸಚಿವರೆನಿಸಿದ್ದರು, ಹಲವಾರು ಕಾರ್ಮಿಕ ಕಲ್ಯಾಣ ನೀತಿಗಳಿಗೆ ಅಡಿಪಾಯ ಹಾಕಿದ ಕೀರ್ತಿಗೆ ಪಾತ್ರರಾದರು. 1947 ರಂದು ಜಿನೀವಾದಲ್ಲಿ ನಡೆದ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಕಾರ್ಮಿಕ ಸಮ್ಮೇಳನದಲ್ಲಿ ಭಾಗವಹಿಸಿದ ಪ್ರತಿಷ್ಠಿತ ಭಾರತೀಯ ನಿಯೋಗದ ಭಾಗವಾಗಿದ್ದರು, 1952 ರವರೆಗೆ ಕಾರ್ಮಿಕ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು ಭಾರತದ ಸಂವಿಧಾನವನ್ನು ರಚಿಸಿದ ಸಂವಿಧಾನ ಸಭೆಯ ಸದಸ್ಯರಾಗಿದ್ದರು, ಮಧ್ಯಂತರ ರಾಷ್ಟ್ರೀಯ ಸರ್ಕಾರದಲ್ಲಿಯೂ ಸೇವೆ ಸಲ್ಲಿಸಿದರು. ನೆಹರೂ ಅವರ ಸಂಪುಟದಲ್ಲಿ ಹಲವು ಸಚಿವ ಹುದ್ದೆಗಳನ್ನು ಅಲಂಕರಿಸಿದರು ಎಂದು ಹೇಳಿದರು.
ಭಾವಚಿತ್ರಕ್ಕೆ ಪುಷ್ಪಾರ್ಚನೆ: ಬಾಬು ಜಗಜೀವನ್ ರಾಮ್ ಅವರ ಜಯಂತಿ ಅಂಗವಾಗಿ ಜಿಲ್ಲಾಡಳಿತಭವನದಲ್ಲಿ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಹಾಗೂ ಹಿರಿಯ ಅಧಿಕಾರಿಗಳು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಅಧಿಕಾರಿ ವರ್ಗ ಜಗಜೀವನ್‌ರಾಮ್ ಅವರ ಆದರ್ಶ ಸಾಧನೆಗಳ ಬಗ್ಗೆ ಗುಣಗಾನ ಮಾಡಿದರು.