ಮಂಡ್ಯ: ಮದ್ದೂರು ಪಟ್ಟಣದ ಎಂ.ಎಚ್.ಚೆನ್ನೇಗೌಡ ವಿದ್ಯಾಸಂಸ್ಥೆ ವತಿಯಿಂದ ಸಂಸ್ಥೆಯಲ್ಲಿ ಶುಕ್ರವಾರ ಡಾ.ಬಾಬು ಜಗಜೀವನ ರಾಮ್ ಅವರ 117ನೇ ಜನ್ಮ ದಿನಾಚರಣೆ ಹಾಗೂ ಕಸ್ತೂರಿಬಾ ಉನ್ನತ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕ ಡಿ.ಎನ್.ನಾಗರಾಜು ಅವರಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಅಪೂರ್ವಚಂದ್ರ, ಡಾ.ಬಾಬು ಜಗಜೀವನ ರಾಮ್ ಅವರು ದೇಶ ಕಂಡ ಅತ್ಯಂತ ಸರಳ, ಧೀಮಂತ, ಬುದ್ಧಿವಂತ ರಾಜಕಾರಣಿ. ಉಪ ಪ್ರಧಾನಿಗಳಾಗಿ ಸಮರ್ಥವಾಗಿ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದರು.
ನೆಹರು ಅವರ ಮಂತ್ರಿಮಂಡಲದಲ್ಲಿ ಬಾಬೂಜೀ ಸಚಿವರಾಗಿದ್ದರು. ಮುರಾರ್ಜಿ ದೇಸಾಯಿ ಅವರ ಕಾಲದಲ್ಲಿ ಭಾರತದ ಉಪ ಪ್ರಧಾನಿಯಾಗಿಯೂ ಸೇವೆ ಸಲ್ಲಿಸಿದ ಜಗಜೀವನ ರಾಮ್ ಅವರು ಅಸ್ಪಶ್ಯತೆ ನಿವಾರಣೆಯ ಹೋರಾಟದ ಹರಿಕಾರರಾಗಿದ್ದರು. ಇಂತಹ ಮಹಾನ್ ನಾಯಕರ ಜನ್ಮ ದಿನಾಚರಣೆಯನ್ನು ಆಚರಿಸುತ್ತಿರುವುದು ನಮ್ಮೆಲ್ಲರಿಗೂ ಬಹಳ ಹೆಮ್ಮೆಯ ವಿಚಾರ. ಹಾಗಾಗಿ ಇವರ ಆಶಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ನಿವೃತ್ತಿ ಹೊಂದಿದ ಶಿಕ್ಷಕ ಡಿ.ಎನ್.ನಾಗರಾಜು ಅವರಿಗೆ ಇದೇ ವೇಳೆ ಬೀಳ್ಕೊಡಲಾಯಿತು. ಸಂಸ್ಥೆಯ ಅಧ್ಯಕ್ಷ ಎಂ.ಸ್ವರಾಜ್‌ಚಂದ್, ಕಾರ್ಯದರ್ಶಿ ಅಪೂರ್ವಚಂದ್ರ, ನಿರ್ದೇಶಕರಾದ ಬೋರಯ್ಯ, ಪ್ರಾಂಶುಪಾಲ ಶಂಕರೇಗೌಡ ಹಾಗೂ ಯು.ಎಸ್.ರವಿ, ಚಂದ್ರು ಇತರರು ಪಾಲ್ಗೊಂಡಿದ್ದರು.