ಕೃಷಿಯಲ್ಲಿ ಸ್ವಾವಲಂಬನೆಗೆ ಬಾಬೂಜಿ ಕಾರಣ

06 KRN-1
ಕೆ.ಆರ್.ನಗರ ಪಟ್ಟಣದ ಪುರಸಭೆ ಆವರಣದಲ್ಲಿರುವ ಡಾ.ಬಾಬು ಜಗಜೀವನ್ ರಾಮ್ ಅವರ ಪ್ರತಿಮೆಗೆ ಶಾಸಕ ಡಿ.ರವಿಶಂಕರ್ ಮಾಲಾರ್ಪಣೆ ಮಾಡಿದರು. ಜಿ.ಸುರೇಂದ್ರಮೂರ್ತಿ, ಎನ್.ಎಸ್.ನರಗುಂದ್, ಎಂ.ಎಸ್.ಮಹದೇವ್, ಎಂ.ಲೋಕೇಶ್, ಮಧುವನಹಳ್ಳಿ ರವಿಕುಮಾರ್, ಶಂಕರ್‌ಸ್ವಾಮಿ ಇತರರು ಇದ್ದರು.
Published on

ಕೆ.ಆರ್.ನಗರ: ಕೃಷಿಯಲ್ಲಿ ಕ್ರಾಂತಿ ಮಾಡುವ ಮೂಲಕ ನಮ್ಮ ದೇಶ ಆಹಾರ ಸ್ವಾವಲಂಬನೆ ಸಾಧಿಸಲು ಕಾರಣಕರ್ತರಾಗಿ ಹಸಿರು ಕ್ರಾಂತಿಯ ಹರಿಕಾರ ಎಂಬ ಬಿರುದಾಂಕಿತ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ ಜೀವನ ಮತ್ತು ಸಾಧನೆ ದೇಶಕ್ಕೆ ಮಾದರಿ ಎಂದು ಶಾಸಕ ಡಿ.ರವಿಶಂಕರ್ ಅಭಿಪ್ರಾಯಪಟ್ಟರು.

ಪಟ್ಟಣದ ಪುರಸಭೆಯ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ 39ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ತಮ್ಮ ಅಧಿಕಾರದ ಅವಧಿಯಲ್ಲಿ ದೂರದೃಷ್ಟಿಯ ಆಡಳಿತ ನಡೆಸಿ ಭಾರತ ಆಹಾರ ಕ್ಷೇತ್ರಕ್ಕೆ ಶಾಶ್ವತ ಯೋಜನೆ ರೂಪಿಸಿದ ಅವರು ಅಜರಾಮರ ಎಂದರು.

ಕೃಷಿ ಜತೆಗೆ ಕೈಗಾರಿಕಾ ಕ್ಷೇತ್ರದಲ್ಲಿಯೂ ಕ್ರಾಂತಿಕಾರಕ ನಿರ್ಧಾರಗಳನ್ನು ಕೈಗೊಂಡು ಕಾರ್ಮಿಕರ ಕೆಲಸದ ಅವಧಿಯಲ್ಲಿ ಬದಲಾವಣೆ ತಂದು ಹೊಸ ನಿಯಮಗಳನ್ನು ಜಾರಿಗೊಳಿಸಿದ ಅವರು ಅಧಿಕಾರ ನಡೆಸುವವರಿಗೆ ದಾರಿ ದೀಪವಾಗಿದ್ದು, ಅಂತಹ ಅದ್ಭುತ ಆಡಳಿತಗಾರ ದೇಶದ ಸಂಪತ್ತು ಎಂದು ಬಣ್ಣಿಸಿದರು.

ಬುದ್ಧ್ದ, ಬಸವೇಶ್ವರ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರಂತೆ ಡಾ.ಬಾಬು ಜಗಜೀವನ್ ರಾಮ್ ಅವರು ಸಹ ದೇಶದ ಏಳಿಗೆಗೆ ಅಪಾರ ಕೊಡುಗೆ ನೀಡಿದ್ದು, ಅವರನ್ನು ಸರ್ವರೂ ಗೌರವಿಸಿ ಪೂಜಿಸಬೇಕು ಎಂದರು.

ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಡಾ.ಬಾಬು ಜಗಜೀವನ್ ರಾಮ್ ಅವರ ಸಮುದಾಯ ಭವನಕ್ಕೆ ಹಿಂದೆ ಮೊದಲ ಅವಧಿಗೆ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರಿಂದ ಅನುದಾನ ಕೊಡಿಸಲಾಗಿತ್ತು. ಈಗ ಮುಂದುವರಿದ ಕಾಮಗಾರಿಗೆ 1 ಕೋಟಿ ರೂ. ಅನುದಾನ ಕೊಡಿಸುವುದರ ಜತೆಗೆ ನನ್ನ ಅಧಿಕಾರ ಅವಧಿಯಲ್ಲಿ ಅದನ್ನು ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುತ್ತದೆ. ಅಂಬೇಡ್ಕರ್ ಸಮುದಾಯ ಭವನಕ್ಕೂ ಅನುದಾನ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

ನಾನು ಶಾಸಕನಾಗಿ ಜವಾಬ್ದಾರಿಯುತವಾಗಿ ಹಗಲಿರುಳು ಶ್ರಮಿಸುತ್ತಿದ್ದೇನೆ. ಬೇರೆಯವರಂತೆ ಸಬೂಬು ಹೇಳಿಕೊಂಡು ನೆಪ ಮಾತ್ರಕ್ಕೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿ ಕಾಲ ಕಳೆಯುವುದಿಲ್ಲ. ಯಾರನ್ನು ಓಲೈಸಲು ನಾನು ಹೇಳುವುದಿಲ್ಲ. ಸಮುದಾಯ ಮತ್ತು ಮತದಾರರು ನನಗೆ ನೀಡಿರುವ ಹೊಣೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದು, ಬಾಬೂಜಿ ಅವರ ಆಶಯದಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೂ ಸರ್ಕಾರದ ಯೋಜನೆಗಳು ತಲುಪುವಂತೆ ನೋಡಿಕೊಳ್ಳುತ್ತೇನೆಂದು ನುಡಿದರು.

ಇದಕ್ಕೂ ಮೊದಲು ಶಾಸಕರು ಡಾ.ಬಾಬು ಜಗಜೀವನ್ ರಾಮ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.

ಅಧಿಕಾರಿಗಳ ವಿರುದ್ಧ ಗರಂ:

ಡಾ.ಬಾಬು ಜಗಜೀವನ್ ರಾಮ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ, ಎನ್.ಎಸ್.ನರಗುಂದ್, ಪುರಸಭೆ ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು, ಪಿಎಸ್‌ಐ ಸ್ವಾಮಿಗೌಡ, ಸಮಾಜ ಕಲ್ಯಾಣಾ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎಲ್.ಶಂಕರಮೂರ್ತಿ ಅವರನ್ನು ಹೊರತುಪಡಿಸಿ ಇತರ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಶಾಸಕ ಡಿ.ರವಿಶಂಕರ್ ಗರಂ ಆದರು. ಗೈರಾಗಿರುವ ಅಧಿಕಾರಿಗಳಿಗೆ ನಾಳೆಯೇ ನೋಟಿಸ್ ನೀಡಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ. ಆನಂತರ ನಾನು ಅವರ ವಿರುದ್ಧ ಕಠಿಣ ಕ್ರಮಕ್ಕೆ ಶಿಪಾರಸು ಮಾಡುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ತಹಸೀಲ್ದಾರರಾದ ಜಿ.ಸುರೇಂದ್ರಮೂರ್ತಿ, ಎನ್.ಎಸ್.ನರಗುಂದ್, ತಾಪಂ ಮಾಜಿ ಅಧ್ಯಕ್ಷ ಎಂ.ಎಚ್.ಸ್ವಾಮಿ, ಪುರಸಭಾ ಮಾಜಿ ಅಧ್ಯಕ್ಷ ಡಿ.ಕಾಂತರಾಜು, ತಾಲೂಕು ಆದಿ ಜಾಂಬವ ಸಂಘದ ಅಧ್ಯಕ್ಷ ಎಂ.ಲೋಕೇಶ್ ಮಾತನಾಡಿದರು.

ಡಿಡಿಪಿಐ ಜವರೇಗೌಡ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಪುರಸಭಾ ಉಪಾಧ್ಯಕ್ಷೆ ಪಲ್ಲವಿ ಆನಂದ್, ಸದಸ್ಯರಾದ ಮಿಕ್ಸರ್‌ಶಂಕರ್, ಶಂಕರ್‌ಸ್ವಾಮಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ಕಾಂಗ್ರೆಸ್ ವಕ್ತಾರ ಸೈಯದ್‌ಜಾಬೀರ್, ಎಂಎಸ್‌ಎಸ್ ತಾಲೂಕು ಅಧ್ಯಕ್ಷ ಮಧುವನಹಳ್ಳಿ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಚ್.ಕುಮಾರ್, ಕಾರ್ಯದರ್ಶಿ ಕಂಚುಗಾರ ಕೊಪ್ಪಲುಸ್ವಾಮಿ, ತಾಪಂ ಮಾಜಿ ಸದಸ್ಯ ಶ್ರೀ ನಿವಾಸಪ್ರಸಾದ್, ಮುಖಂಡರಾದ ತಿಮ್ಮಶೆಟ್ಟಿ, ಮಾರಗೌಡನಹಳ್ಳಿ ರಾಜೇಶ್, ಕರ್ಣಕುಮಾರ್, ಡಾ.ದಾಸಪ್ರಕಾಶ್, ಎಂ.ಎ.ನಾಗೇಂದ್ರ, ವೆಂಕಟೇಶ್, ರವಿ ಪೂಜಾರಿ ಮತ್ತಿತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net