ಸಮಾನತೆಯಿಂದ ದೇಶದ ಅಭಿವೃದ್ಧಿ:ಜಗಜೀವನರಾಂ ಜನ್ಮದಿನಾಚರಣೆ

05TMK_DC_Office_Jagajevanram
Published on

ವಿಜಯವಾಣಿ ಸುದ್ದಿಜಾಲ ತುಮಕೂರು

ದೇಶದ ಅಭಿವೃದ್ಧಿಯಾಗಬೇಕಾದರೆ ಸಮಾನತೆ ಕಲ್ಪನೆ ಎಲ್ಲರಲ್ಲೂ ಮೂಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸಾಂಕೇತಿಕವಾಗಿ ಆಯೋಜಿಸಿದ್ದ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಂ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.

ಏ.5ರಂದು ದೇಶ-ವಿದೇಶಗಳಲ್ಲಿ ಜಗಜೀವನರಾಂ ಅವರ ಜನ್ಮದಿನಾಚರಣೆ ನಡೆಯುತ್ತಿದೆ, ಸಮಾನತೆಯ ಹರಿಕಾರನ ಸ್ಮರಣೆ ದಿನಾಚರಣೆಗೆ ಸೀಮಿತವಾಗದೆ ಎಲ್ಲರ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು ಎಂದರು.

ಜಗಜೀವನರಾಂ ಅವರು ತಮ್ಮ ಬಾಲ್ಯ ಹಾಗೂ ವಿದ್ಯಾರ್ಥಿ ಜೀವನದಲ್ಲಿ ಸಾಮಾಜಿಕ ಅನಿಷ್ಟಗಳಲ್ಲೊಂದಾದ ಅಸ್ಪಶ್ಯತೆಯನ್ನು ಅನುಭವಿಸಿ ದೌರ್ಜನ್ಯಗಳನ್ನು ಎದುರಿಸಿ ದೇಶದ ಉನ್ನತ ಸ್ಥಾನವನ್ನು ಅಲಂಕರಿಸಿದ ಮಹಾನ್ ವ್ಯಕ್ತಿ ಎನಿಸಿಕೊಂಡಿದ್ದಾರೆ ಎಂದರು.

ದೇಶದಲ್ಲಿ 1965ರಲ್ಲಿದ್ದ ಭೀಕರ ಬರಗಾಲದ ಸಂದರ್ಭದಲ್ಲಿ ಜಗಜೀವನರಾಂ ಅವರು ನಡೆಸಿದ ಹಸಿರು ಕ್ರಾಂತಿಯಿಂದ ಅಗತ್ಯಕ್ಕಿಂತ ಹೆಚ್ಚು ಆಹಾರ ಉತ್ಪಾದನೆ ಮಾಡಲು ಸಾಧ್ಯವಾಯಿತು. ಕಾರ್ಮಿಕರ ಆಶೋತ್ತರಗಳನ್ನು ಈಡೇರಿಸುವ ಉದ್ದೇಶದಿಂದ ಕಾರ್ಮಿಕ ಕಲ್ಯಾಣ ನಿಯಮಗಳಲ್ಲಿ ಸಾಕಷ್ಟು ಬದಲಾವಣೆ, ತಿದ್ದುಪಡಿಗಳನ್ನು ತಂದರು ಎಂದು ಸ್ಮರಿಸಿದರು.

ಆರ್ಥಿಕ ಸಂಕಷ್ಟಗಳ ನಡುವೆಯೂ ಎದುರಾಳಿ ದೇಶಗಳಾದ ಪಾಕಿಸ್ತಾನ, ಬಾಂಗ್ಲಾ, ಚೀನಾ ದೇಶಗಳಿಂದ ರಕ್ಷಣೆ ಪಡೆಯಲು ಭದ್ರ ಬುನಾದಿ ಹಾಕಿಕೊಟ್ಟ ಉತ್ತಮ ನಾಯಕರಾಗಿದ್ದರು ಎಂದು ತಿಳಿಸಿದರಲ್ಲದೆ ಇಂತಹ ಮಹಾನ್ ವ್ಯಕ್ತಿಗಳ ಜೀವನ ಸಾಧನೆ, ಸಾಮಾಜಿಕ ಪರಿಶ್ರಮ, ತತ್ವಾದರ್ಶ, ಜೀವನಚರಿತ್ರೆಯ ಬಗ್ಗೆ ಮುಂದಿನ ಪೀಳಿಗೆ ಮಕ್ಕಳಿಗೆ ತಿಳಿಯಬೇಕು ಎಂದರು.

ಶಾಸಕ ಜಿ.ಬಿ. ಜ್ಯೋತಿಗಣೇಶ್, ಜಿಪಂ ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ಜಿಲ್ಲಾ ಪೊಲೀಸ್ ಅಧೀಕ್ಷಕ ರಾಹುಲ್ ಕುಮಾರ್, ಜಿಪಂ ಉಪಕಾರ್ಯದರ್ಶಿ ಅತಿಕ್ ಪಾಷಾ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪ ವಿಭಾಗಾಧಿಕಾರಿ ವಿ.ಅಜಯ್ ಇದ್ದರು.ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಂ ಅವರ ಜನ್ಮದಿನಾಚರಣೆ ನಡೆಯಿತು. ವೈ.ಎಸ್.ಪಾಟೀಲ, ಜಿ.ಬಿ.ಜ್ಯೋತಿಗಣೇಶ್, ವೈ.ಎಚ್.ಹುಚ್ಚಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net