ದೇಶಕ್ಕೆ ಬಾಬುಜಗಜೀವನ್ ರಾಮ್ ಕೊಡುಗೆ ಅಪಾರ

05pnd001
Published on

 ಪಾಂಡವಪುರ:  ಭಾರತೀಯ ಕೃಷಿ ಆಧುನೀಕರಣಗೊಳ್ಳಲು ಬಾಬುಜಗಜೀವನ ರಾಮ್ ಅವರ ಪಾತ್ರ ಮಹತ್ವದ್ದಾಗಿದೆ ಎಂದು ತಹಸೀಲ್ದಾರ್ ಸಂತೋಷ್‌ಕುಮಾರ್ ಹೇಳಿದರು.

ಪಟ್ಟಣದ ಮಿನಿವಿಧಾನಸೌಧದ ತಹಸೀಲ್ದಾರ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಡಾ.ಬಾಬುಜಗಜೀವನ ರಾಮ್ ಅವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಾಬೂಜಿ ಎಂದು ಕರೆಯಲ್ಪಡುವ ಬಾಬು ಜಗಜೀವನ ರಾಮ್ ಅವರು ದೇಶದಲ್ಲಿ ಸಮಾನತೆ ಕಲ್ಪಿಸುವ ಹಾಗೂ ಸ್ವಾತಂತ್ರೃ ಚಳವಳಿಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇವರು ಕೃಷಿ ಸಚಿವರಾಗಿದ್ದ ಸಂದರ್ಭದಲ್ಲಿ ನಡೆಸಿದ ಹಸಿರು ಕ್ರಾಂತಿಯಿಂದಾಗಿ ಭಾರತದಲ್ಲಿ ಇಂದಿಗೂ ಆಹಾರದ ಕೊರತೆ ಎದುರಾಗಿಲ್ಲ. ಇಂತಹ ಮಹಾನ್ ನಾಯಕರ ಜೀವನ, ಸಾಧನೆಯ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ರಾಜ್ಯ ಸರಕಾರ ಮಹಾತ್ಮರು, ಸಾಧಕರ ಜೀವನ ಚರಿತ್ರೆಯನ್ನು ತಿಳಿದುಕೊಳ್ಳಲಿ ಎಂಬ ಉದ್ದೇಶದಿಂದ ಇಂತಹ ಜಯಂತಿಯನ್ನು ಆಚರಣೆ ಮಾಡುತ್ತಿದೆ. ಆದರೆ, ಸಾರ್ವಜನಿಕರು ಇಂತಹ ಮಹಾತ್ಮರ ಜಯಂತಿಗಳಿಗೆ ಗೈರು ಹಾಜರಾಗುತ್ತಿರುವುದು ವಿಷಾಧನೀಯ ಸಂಗತಿ. ಪ್ರತಿಯೊಬ್ಬರೂ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಹಾತ್ಮರ ಕೊಡುಗೆ ಬಗ್ಗೆ ತಿಳಿದುಕೊಳ್ಳಬೇಕು. ಅವರ ತತ್ವಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಮನವಿ ಮಾಡಿದರು.

ಟಿಎಪಿಸಿಎಂಎಸ್ ನಿರ್ದೇಶಕ ಕಣಿವೆಯೋಗೇಶ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಂ ಅವರು ದೇಶದಲ್ಲಿ ತಾಂಡವವಾಡುತ್ತಿದ್ದ ಅಸ್ಪಶ್ಯತೆ, ಅಸಮಾನತೆಯ ವಿರುದ್ಧ ಹೋರಾಟ ನಡೆಸಿದ ಮಹಾನ್ ನಾಯಕ. ಈ ದೇಶಕ್ಕೆ ಇವರ ಕೊಡುಗೆ ಅಪಾರ ಎಂದು ತಿಳಿಸಿದರು.

ವಿಜಯ ಕಾಲೇಜಿ ಪ್ರಾಧ್ಯಾಪಕ ಜಯಕುಮಾರ್ ಉಪನ್ಯಾಸ ನೀಡಿದರು. ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿಜಯ ಕಾಲೇಜಿನ ವಿದ್ಯಾರ್ಥಿಗಳಾದ ಅಶ್ವಿನಿ, ರಕ್ಷಿತಾ ಅವರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಸಮಾರಂಭದಲ್ಲಿ ತಾಪಂ ಇಒ ಲೋಕೇಶ್‌ಮೂರ್ತಿ, ತಾಪಂ ಮಾಜಿ ಸದಸ್ಯ ಅಲ್ಪಳ್ಳಿಗೋವಿಂದಯ್ಯ, ದಸಂಸ ಮುಖಂಡರಾದ ಟೌನ್ ಚಂದ್ರು, ಕಣಿವೆರಾಮು, ಅಂಕಯ್ಯ, ಕಾಂಗ್ರೆಸ್ ಮುಖಂಡ ಸಿ.ಆರ್.ರಮೇಶ್, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪ್ರಭಾಕರ್, ಸಿಬ್ಬಂದಿ ಕೋಮಲಾ, ಲೋಕೇಶ್, ಅರಳಕುಪ್ಪೆ ಮಹದೇವು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net