

ದೇವನಹಳ್ಳಿ : ಬಾಬು ಜಗಜೀವನ ರಾಮ್ ಸ್ವಾತಂತ್ರ ಹೋರಾಟಗಾರರಷ್ಟೆ ಅಲ್ಲದೇ, ಸಮಾಜ ಸೇವಕರೂ ಆಗಿದ್ದರು. ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿದ ಇವರು ನೆಹರು ಅವರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. ಮುರಾರ್ಜಿ ದೇಸಾಯಿ ಕಾಲದಲ್ಲಿ ಭಾರತದ ಉಪ ಪ್ರಧಾನಿಯೂ ಆಗಿದ್ದರು. ಅಸಶ್ಯತಾ ನಿವಾರಣೆಯ ಹೋರಾಟದ ಮಹಾನ್ ದಲಿತ ನಾಯಕರಾಗಿದ್ದರು ಎಂದು ಪ್ರಭಾರ ತಹಸೀಲ್ದಾರ್ ಜಯಕುಮಾರ್ ಹೇಳಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಸಮಾಜಕಲ್ಯಾಣ ಇಲಾಖೆ ವತಿಯಿಂದ ಭಾನುವಾರ ಆಯೋಜಿಸಿದ್ದ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಮ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಸ್ಪೃಶ್ಯತಾ ನಿವಾರಣೆ ಹೋರಾಟದ ನಾಯಕತ್ವವಹಿಸಿದ್ದ ಮಹಾನ್ ದಲಿತ ನಾಯಕ ಜಗಜೀವನ ರಾಮ್ ಭಾರತದ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ರಾಜಕಾರಣದಲ್ಲಿಯೂ ಪ್ರಮುಖ ಪಾತ್ರವಹಿಸಿದ್ದರು ಎಂದರು.
ಭಾರತದಲ್ಲಿ ದೀರ್ ಕಾಲದಿಂದ ಬೆಳೆದುಕೊಂಡು ಬಂದಿದ್ದ ಮೇಲು&ಕೀಳು ತಾರತಮ್ಯ, ಜಾತಿ ಪದ್ಧತಿ, ಅಸ್ಪೃಶ್ಯ ಎಂಬ ಮನೋಭಾವಗಳನ್ನು ತೊಡೆದು ಹಾಕಲು ಸಾಮಾಜಿಕ ನೆಲೆಗಟ್ಟಿನಲ್ಲಿ ಹೋರಾಡಿದವರು ಅನೇಕರು. ಆದರೆ ಅವರ ಏಳಿಗೆಗೆ ಹೆಚ್ಚಿನ ಚುರುಕು ನೀಡಿ ಒಂದು ಸ್ಪಷ್ಟ ರೂಪ ಕೊಟ್ಟ ಕೆಲವೇ ಕೆಲವು ನಾಯಕರಲ್ಲಿ ಬಾಬು ಜಗಜೀವನ ರಾಮ್ ಒಬ್ಬರು, ಆಡು ಮುಟ್ಟದ ಸೊಪ್ಪಿಲ್ಲ ಕೇಂದ್ರ ಸರ್ಕಾರದಲ್ಲಿ ಅವರು ಸಚಿವರಾಗಿ ನಿರ್ವಹಿಸದ ಖಾತೆಗಳಿಲ್ಲ ಎಂದರು.
ಪುಷ್ಪನಮನ ಸಲ್ಲಿಕೆ: ಮೊದಲಿಗೆ ತಾಲೂಕು ಆಡಳಿತ ಸೌಧದ ಆವರಣದಲ್ಲಿರುವ ಡಾ.ಬಾಬು ಜಗಜೀವನ ರಾಮ್ ಪುತ್ಥಳಿಗೆ ಸಮಾಜದ ಮುಖಂಡರ ಜತೆಗೂಡಿ ಮಾಲಾರ್ಪಣೆ ಮಾಡಿದ ತಹಸೀಲ್ದಾರ್, ನಂತರ ಸಭಾಂಗಣದಲ್ಲಿ ಅವರ ಭಾವಚಿತ್ರಕ್ಕೆ ಮಾದಿಗ ದಂಡೋರ ಸಂಟನೆಯ ಮುಖಂಡರ ಜತೆ ಪೂಜಿಸಿ ಪುಷ್ಪನಮನ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಅಣ್ಣೇಶ್ವರ ವೆಂಕಟೇಶ್, ಪದಾಧಿಕಾರಿಗಳದ ಸೋಲೂರು ನಾಗರಾಜ್, ಗುರಪ್ಪ, ಕದಿರಪ್ಪ, ಮುನಿರಾಜು, ಶ್ರೀನಿವಾಸಗಾಂಧಿ, ದೇವರಾಜ್ ಇದ್ದರು.
ಭಾಗವಹಿಸಲು ಹಿಂದೇಟು : ಬಿಹಾರದ ಆರಾ ಜಿಲ್ಲೆಯ ಚಾಂದ್ವಾ ಗ್ರಾಮದಲ್ಲಿ 1908ರ ಏಪ್ರಿಲ್ 5ರಂದು ಜನಿಸಿದ ಬಾಬು ಜಗಜೀವನ ರಾಮ್ ವಿದ್ಯಾರ್ಥಿಯಾಗಿದ್ದಾಗಲೇ ಸಾಕಷ್ಟು ನಿಂದನೆ, ಅಪಮಾನ ಹಾಗೂ ನೋವುಗಳನ್ನು ಅನುಭವಿಸಿದ್ದರು. ಮುಂದೆ ದಲಿತ ನಾಯಕರಾಗಿ ರೂಪುಗೊಂಡ ಜಗಜೀವನ ರಾಮ್ ದಲಿತರ ಉದ್ದಾರಕ್ಕೆ ಶ್ರಮಿಸಿದ ಪ್ರತಿಫಲವಾಗಿ ನಾವು ರಾಜಕೀಯವಾಗಿ, ಸಾಮಾಜಿಕವಾಗಿ ಮುಂದೆ ಬರಲು ಸಾಧ್ಯವಾಯಿತು. ಆದರೆ ಅವರ ಹೋರಾಟದಿಂದ ಬಂದ ಮೀಸಲಾತಿ ಪಡೆದು ಉನ್ನತ ಮಟ್ಟಕ್ಕೆ ಬೆಳೆದ ಸಮುದಾಯಗಳ ಜನರು ಅವರನ್ನು ನೆನೆಯುವ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಾರೆ ಎಂದು ಮಾದಿಗ ದಂಡೋರದ ಜಿಲ್ಲಾ ಅಧ್ಯಕ್ಷ ಜಿ.ಮಾರಪ್ಪ ಬೇಸರಿಸಿದರು.