ಬಾಬು ಜಗಜೀವನ ರಾಮ್ ಕೊಡುಗೆ ಅಗಣ್ಯ: ಜಿಲ್ಲಾಧಿಕಾರಿ ಡಾ.ಕುಮಾರ ಬಣ್ಣನೆ

Babu Jagjivan Ram death anniversary Mandya
Published on

ಮಂಡ್ಯ: ಶೋಷಿತ ಸಮುದಾಯದಲ್ಲಿ ಜನಿಸಿ ಆ ಸಮುದಾಯದವರ ಏಳಿಗೆಗಾಗಿ ಶ್ರಮಿಸಿದ ಡಾ. ಬಾಬು ಜಗಜೀವನ ರಾಮ್ ಅವರು ದೇಶಕ್ಕೆ ನೀಡಿರುವ ಕೊಡುಗೆ ಅಗಣ್ಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಜಿಲ್ಲಾಡಳಿತ ವತಿಯಿಂದ ಹಸಿರು ಕ್ರಾಂತಿಯ ಹರಿಕಾರ ಹಾಗೂ ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಮ್ ಅವರ 39ನೇ ಪುಣ್ಯತಿಥಿ ಅಂಗವಾಗಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಉದ್ಯಾನದಲ್ಲಿ ಡಾ.ಬಾಬು ಜಗಜೀವನ ರಾಂ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ಮಾತನಾಡಿದರು.

ಡಾ.ಬಾಬು ಜಗಜೀವನ ರಾಂ ಅವರು ಚಿಕ್ಕ ವಯಸ್ಸಿನಲ್ಲಿ ರಾಜಕೀಯವನ್ನು ಪ್ರವೇಶಿಸಿ ಅತಿ ಹೆಚ್ಚು ಕಾಲ ಸಕ್ರಿಯವಾಗಿದ್ದರು. ಮುಖ್ಯವಾಗಿ ಸಮಾಜ ಸುಧಾರಣೆಗಾಗಿ ಶ್ರಮಿಸಿದರು. ಸಾಮಾಜಿಕ ನ್ಯಾಯಕ್ಕಾಗಿ ಅನೇಕ ಹೋರಾಟಗಳ ಮೂಲಕ ಸಮಾಜದಲ್ಲಿ ಬದಲಾವಣೆ ತಂದವರು ಬಾಬೂಜಿ ಎಂದರೆ ತಪ್ಪಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟರು.

ಅಂಬೇಡ್ಕರ್ ಮತ್ತು ಡಾ. ಬಾಬೂಜಿ ಮಹಾನ್ ವ್ಯಕ್ತಿಗಳು. ದೇಶದ ಶೋಷಿತ ಸಮುದಾಯದ ಎರಡು ಕಣ್ಣುಗಳು. ಇಂದಿನ ಯುವ ಪೀಳಿಗೆಗಳು ಇವರ ಚಿಂತನೆ ಹಾಗೂ ಜೀವನ ಮೌಲ್ಯಗಳನ್ನು ಮೈಗೂಡಿಸಿಕೊಂಡು ಆದರ್ಶಗಳನ್ನು ಪಾಲಿಸಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕಾವ್ಯಶ್ರೀ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಕೃಷ್ಣಕುಮಾರ್, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಕೋಮಲ್ ಕುಮಾರ್, ಡಾ.ಬಾಬು ಜಗಜೀವನ ರಾಂ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎನ್.ಆರ್.ಚಂದ್ರಶೇಖರ್, ನಗರಸಭಾ ಸದಸ್ಯ ಎಂ.ಎನ್.ಶ್ರೀಧರ್, ಇಂಜಿನಿಯರ್ ರವಿಕುಮಾರ್, ಮುಖಂಡರಾದ ಎಂ.ಎನ್.ತುಳಸೀಧರ್, ಸಿ.ಕೆ.ಪಾಪಯ್ಯ, ಎಂ.ವಿ.ಕೃಷ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net