ಸಮಾನತೆ ತಂದುಕೊಟ್ಟ ಮಹಾನಾಯಕ, ಡಾ. ಬಾಬು ಜಗಜೀವನ ರಾಮ್ ಜಯಂತಿ

IMG-20250405-WA0015.jpg
Published on

ಹುಬ್ಬಳ್ಳಿ: ದೇಶದ ಪ್ರತಿಯೊಂದು ಜಾತಿ, ಧರ್ಮಗಳಿಗೆ ಅದರದೇ ಆದ ಮಹತ್ವ ಇದೆ. ಇಂತಹ ವೈವಿಧ್ಯತೆಯ ರಾಷ್ಟ್ರದಲ್ಲಿ ಎಲ್ಲರಿಗೂ ಸಮಾನತೆ ತಂದುಕೊಟ್ಟ ಮಹಾನ್ ನಾಯಕ ಡಾ. ಬಾಬು ಜಗಜೀವನ ರಾಮ್ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ತಾಲೂಕು ಆಡಳಿತಸೌಧದ ತಾಪಂ ಸಭಾಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಡಾ. ಬಾಬು ಜಗಜೀವನ್ ರಾಮ್ ಅವರ 118ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶೋಷಿತರ ಧ್ವನಿಯಾಗಿ ಎಲ್ಲರಿಗೂ ನ್ಯಾಯ ಸಿಗಬೇಕೆಂದು ಹೋರಾಡಿದ ಶೇಷ್ಠ ನಾಯಕರು, ಜಾತಿ ಪದ್ಧತಿ ಹೋಗಲಾಡಿಸಲು ಶ್ರಮಿಸಿದರು. ಡಾ. ಬಾಬು ಜಗಜೀವನ ರಾಮ್ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಾಜಕ್ಕೆ ನೀಡಿರುವ ಕೊಡುಗೆಗಳು ಅಪಾರ ಎಂದರು.

ಹುಬ್ಬಳ್ಳಿ ಶಹರ ತಹಸೀಲ್ದಾರ್ ಕಲಗೌಡ ಪಾಟೀಲ ಮಾತನಾಡಿ, ಡಾ. ಬಾಬು ಜಗಜೀವನ ರಾಮ್ ಅವರನ್ನು ಹಸಿರು ಕ್ರಾಂತಿಯ ಹರಿಕಾರ ಎಂದು ಕರೆಯಲಾಗುತ್ತದೆ. ಅವರು ಇಡೀ ದೇಶದಲ್ಲಿ ಆಹಾರದ ಕೊರತೆ ಎದುರಾದಾಗ ವಿವಿಧ ತಳಿಗಳ ಆಹಾರ ಬೆಳೆಗಳನ್ನು ಬೆಳೆಯುವಂತೆ ಪ್ರೇರಣೆ ನೀಡಿದರು. ಇಂತಹ ಮಹಾನಾಯಕರ ಜಯಂತಿ ಕಾರ್ಯಕ್ರಮಗಳಿಗೆ ಮಕ್ಕಳನ್ನೂ ಕರೆದುಕೊಂಡು ಬರಬೇಕು. ಇದರಿಂದ ಅವರಿಗೆ ನಾಯಕರ ತತ್ವಾದರ್ಶಗಳು, ಕೊಡುಗೆಗಳು, ಸಾಧನೆಗಳ ಬಗ್ಗೆ ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಮುಖಂಡ ಗುರುನಾಥ ಉಳ್ಳಿಕಾಶಿ ಮಾತನಾಡಿದರು. ಡಾ. ಬಾಬು ಜಗಜೀವನ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ, ಪೂಜೆ ಸಲ್ಲಿಸಲಾಯಿತು. ಸಮಾಜದ ಸಾಧಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ರಾಜೇಶ ಹೊಂಗಲ್ ಅವರು ಉಪನ್ಯಾಸ ನೀಡಿದರು.

ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಜೆ.ಬಿ. ಮಜ್ಜಗಿ, ಮುಖಂಡರಾದ ಪಕ್ಕಣ್ಣ ದೊಡ್ಡಮನಿ, ಶುಭಾ ಬಳ್ಳಾರಿ, ಗೌರಮ್ಮ ಹರಿಜನ, ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net