ಬಹು ಕಾಲದಿಂದ ಮಂಗಳೂರು ನಗರದ ಜನರ ನಿದ್ದೆಗೆಡಿಸಿದ್ದ ಬ್ರಹ್ಮರಾಕ್ಷಸ - ಕೊಟ್ಟಾರ ಶ್ರೀ ಮಹಾದೈವರಾಜ ಕೋಟೆದ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ನಡೆಯಿತು ಉಚ್ಚಾಟನೆ

mng--30 jan Babbuswami
Published on

ಮಂಗಳೂರು: ಕರಾವಳಿಯಲ್ಲಿ ದೈವಾರಾಧನೆಗೆ ವಿಶೇಷ ಮಹತ್ವವಿದೆ. ತುಳುನಾಡಿನ ಜನರು ದೈವಗಳ ಮೇಲೆ ಅಪಾರ ನಂಬಿಕೆ ಹೊಂದಿದ್ದಾರೆ. ದುಷ್ಟ ಶಕ್ತಿಗಳನ್ನು ನಿರ್ನಾಮ ಮಾಡಿ ನಂಬಿದ ಜನರಿಗೆ ಇಂಬು ಕೊಡುವ ದೈವಗಳು ಕಾರ್ಣಿಕ ಶಕ್ತಿಯಾಗಿರುವುದು ಅನೇಕ ದೃಷ್ಟಾಂತಗಳಿಂದ ಸಾಬೀತಾಗಿದೆ.

ತುಳುನಾಡಿನಲ್ಲಿ ಪ್ರೇತಾತ್ಮ, ಬ್ರಹ್ಮ ರಾಕ್ಷಸ ಮೊದಲಾದ ಶಕ್ತಿಗಳ ಬಗ್ಗೆಯೂ ಜನರಲ್ಲಿ ಈಗಲೂ ನಂಬಿಕೆಗಳಿವೆ. ಕೊಟ್ಟಾರ, ದೇರೆಬೈಲ್, ಅಬ್ಬಕ್ಕ ನಗರದ ಜನರು ಬ್ರಹ್ಮ ರಾಕ್ಷಸನಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದುದು ಪ್ರಶ್ನಾ ಚಿಂತನೆಗಳಿಂದ ಗೊತ್ತಾಗಿತ್ತು. ಅದನ್ನು ಉಚ್ಚಾಟನೆ ಮಾಡಿದರೆ ಮಾತ್ರ ಸಮಸ್ಯೆಗಳು ಬಗೆ ಹರಿಯಲು ಸಾಧ್ಯ ಎಂದು ಗೊತ್ತಾಗಿತ್ತು. ಅವುಗಳ ಉಚ್ಚಾಟನೆಗೆ ಊರಿನ ಜನರು ಗ್ರಾಮದ ಆರಾದ್ಯ ದೈವ ಮಹಾದೈವರಾಜ ಕೋಟೆದ ಬಬ್ಬುಸ್ವಾಮಿಯ ಮೊರೆ ಹೋಗಿದ್ದರು. ಅದರ ಪ್ರಕಾರ ಬುಧವಾರ ರಾತ್ರಿ ರಣಕಾಳಿ ಹಾಗೂ ಬ್ರಹ್ಮರಾಕ್ಷಸ ಉಚ್ಚಾಟನೆ ಮಾಡಲಾಗಿದೆ.

ಪ್ರಕ್ರಿಯೆ ಹೇಗೆ ನಡೆಯಿತು?

ಕೊಟ್ಟಾರ ಶ್ರೀ ಮಹಾದೈವರಾಜ ಕೋಟೆದ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ರಾತ್ರಿ 11 ಗಂಟೆಯಿಂದ ಬೆಳಗ್ಗಿನ ಜಾವ 5 ಗಂಟೆಯ ತನಕ ಉಚ್ಚಾಟನೆ ಪ್ರಕ್ರಿಯೆಗಳು ನಡೆದವು. ಊರಿನ ಪ್ರತೀ ಮನೆಯವರು ಇದರಲ್ಲಿ ಭಾಗಿಯಾಗಬೇಕು. ಪ್ರತೀ ಮನೆಯಿಂದ ರಕ್ತ ಬಲಿಗೆ ಒಂದು ಕೋಳಿ, ಒಂದು ಲಿಂಬೆ ಹಣ್ಣು, ಒಂದು ತೆಂಗಿನಕಾಯಿ, ಒಂದು ತೆಂಗಿನ ಗರಿಯ ದೀವಟಿಗೆಯನ್ನು ದೈವಸ್ಥಾನಕ್ಕೆ ನೀಡಲು ತಿಳಿಸಲಾಗಿತ್ತು. ರಾತ್ರಿ 12 ಗಂಟೆಯಾಗುತ್ತಿದ್ದಂತೆ ದೈವರಾಜ ಬಬ್ಬುಸ್ವಾಮಿ ಹಾಗೂ ಗುಳಿಗ ದೈವದ ಪಾತ್ರಿಯ ದರ್ಶನ ಸೇವೆಯಾಗಿ ಆ ಪರಿಸರದಲ್ಲಿ ಇರುವ ಎಲ್ಲಾ ಪ್ರೇತಾತ್ಮ , ಬ್ರಹ್ಮರಾಕ್ಷಸನನ್ನು ದೈವರಾಜ ಬಬ್ಬುಸ್ವಾಮಿ ಆವಾಹನೆ ಮಾಡಿ ಗುಳಿಗ ದೈವದ ಮೂಲಕ ಕಳುಹಿಸಿ ನದಿ ತೀರದಲ್ಲಿ ಮೋಕ್ಷ ನೀಡಲಾಯಿತು. ಈ ಸಂದರ್ಭ ಪರಿಸರದಲ್ಲಿ ಯಾರು ಕೂಡಾ ಓಡಾಡುವಂತಿರಲಿಲ್ಲ. ಹೀಗಾಗಿ ಪೊಲೀಸರು ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆ ತನಕ ಆ ಪರಿಸರದಲ್ಲಿ ಸಂಚಾರ ನಿಷೇಧ ಮಾಡಿದ್ದರು. ಪರಿಸರದಲ್ಲಿ ಯಾರು ಕೂಡಾ ಓಡಾಡದಂತೆ ಮೊದಲೇ ಸೂಚನೆ ನೀಡಲಾಗಿತ್ತು. ಪೂಜಾ ವಿಧಿ ವಿಧಾನ ನೋಡುವ ಆಸಕ್ತಿ ಉಳ್ಳ ಭಕ್ತರು ರಾತ್ರಿ 10 ಗಂಟೆ ಒಳಗೆ ದೈವಸ್ಥಾನಕ್ಕೆ ಬಂದು ಸೇರಬೇಕು ದೈವಸ್ಥಾನದ ಆಡಳಿತ ಮಂಡಳಿ ತಿಳಿಸಿತ್ತು.

ದೈವಸ್ಥಾನದಲ್ಲಿ ಉಚ್ಚಾಟನೆ ಮಾಡಿದ ಬಳಿಕ ಸುಮಾರು 5 ಕಿ.ಮೀ. ದೂರ ಇರುವ ಕೂಳೂರಿನ ಫಲ್ಗುಣಿ ನದಿಯ ತನಕ ಗುಳಿಗ ದೈವ ಸೇರಿ ಕ್ಷೇತ್ರದವರು ನಡೆದುಕೊಂಡು ಹೋಗಿ ನದಿಗೆ ಬಿಡಲಾಗಿದೆ. ಈ ಮೂಲಕ ಬ್ರಹ್ಮರಾಕ್ಷಸ ದೇರೆಬೈಲ್ ಗ್ರಾಮದಿಂದ ಬಿಟ್ಟು ಹೋಯಿತು ಎನ್ನುವ ನಂಬಿಕೆ ಮೂಡಿದೆ. ಒಟ್ಟಿನಲ್ಲಿ ಇಂತಹ ಅಪರೂಪದ ವಿಶಿಷ್ಟ ಸಂಪ್ರದಾಯಕ್ಕೆ ದೇರೆಬೈಲ್ ಗ್ರಾಮ ಸಾಕ್ಷಿಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net