ದ್ರಾಕ್ಷಿನಾಡಿನಲ್ಲಿ ಸಂಭ್ರಮದ ಅಕ್ಷರ ಜಾತ್ರೆ

HN 30-1
Published on

ವಿಜಯಪುರ: ಪ್ರಮುಖ ರಸ್ತೆಗಳಲ್ಲಿ ಬಣ್ಣ ಬಣ್ಣದ ರಂಗೋಲಿಗಳ ಚಿತ್ತಾರ. ಮೆರವಣಿಗೆಯುದ್ದಕ್ಕೂ ಹೂ ಮಳೆ. ಎಲ್ಲೆಲ್ಲೂ ಡೊಳ್ಳು ಕುಣಿತದ ನಾದ. ಬೃಹತ್ ಪಲ್ಲಕ್ಕಿಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರ ಸಂಭ್ರಮದ ಮೆರವಣಿಗೆ.
ದ್ರಾಕ್ಷಿನಾಡು ಬಬಲೇಶ್ವರದಲ್ಲಿ ಗುರುವಾರ ನಡೆದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಂಡು ಬಂದ ದೃಶ್ಯಗಳು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರು ಅಕ್ಷರ ಜಾತ್ರೆಗೆ ಸಾಕ್ಷಿಯಾಗಿದ್ದರು.

ಕನ್ನಡದ ಅಸ್ಮಿತೆಗಿಲ್ಲ ಪೆಟ್ಟು

ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಸಾಹಿತಿ ಕುಂ.ವೀರಭದ್ರಪ್ಪ, ಕನ್ನಡ ಭಾಷೆಯ ಅಸ್ಮಿತೆಗೆ ಯಾವುದೇ ಪೆಟ್ಟು ಇಲ್ಲ. ಆದರೆ ವಿಶ್ವವಿದ್ಯಾಲಯಗಳಲ್ಲಿರುವ ಕೆಲವರು ಕನ್ನಡಕ್ಕೆ ಉಳಿಗಾಲವಿಲ್ಲ ಎನ್ನುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಭಾಷೆಗೆ ಎಂದೂ ಅಳಿವಿಲ್ಲ, ಕನ್ನಡ ಭಾಷೆ ಮಾತನಾಡುವುದೇ ನಮ್ಮ ದೊಡ್ಡ ಪುಣ್ಯ, ಕನ್ನಡ ಭಾಷೆಯಷ್ಟು ಸುಂದರ ಭಾಷೆ ಇನ್ನೊಂದಿಲ್ಲ. ಇಂಗ್ಲಿಷ್ ಮಾಧ್ಯಮ ಶಾಲೆಗಳು ಹಳ್ಳಿಯಲ್ಲಿ ತಲೆ ಎತ್ತುತ್ತಿವೆ. ಹೀಗಾಗಿ ತಾಯಂದಿರು ಕನ್ನಡ ಮಾಧ್ಯಮ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಬೇಕು. ಮಮ್ಮಿ, ಡ್ಯಾಡಿ ಎನ್ನುವ ಸಂಸ್ಕೃತಿ ಕಲಿಸಬಾರದು, ಅಂಕಲ್ ಹಾಗೂ ಆಂಟಿ ಎಂಬ ಪದಗಳನ್ನು ಉಚ್ಛಾಟಿಸಬೇಕಾಗಿದೆ ಎಂದು ಹೇಳಿದರು.

ಹಳ್ಳಿಗಳು ವೃದ್ಧಾಶ್ರಮಗಳಾಗದಿರಲಿ

ಹಳ್ಳಿಗಳನ್ನು ವೃದ್ಧಾಶ್ರಮಗಳಾಗಿ ಪರಿವರ್ತಿಸಿದ ಕೀರ್ತಿ ಇಂಗ್ಲಿಷ್ ಭಾಷೆಗೆ ಸಲ್ಲುತ್ತದೆ. ತಮ್ಮ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ ಕೊಡಿಸಿ ಮಕ್ಕಳನ್ನು ವಿದೇಶಗಳಿಗೆ ಕಳಿಸಿಕೊಡಲಾಗುತ್ತಿದ್ದು, ಇದರಿಂದ ಪಾಲಕರನ್ನು ಒಂದು ರೀತಿ ವೃದ್ಧಾಶ್ರಮಗಳಿಗೆ ದೂಡುವಂತೆ ಮಾಡಿದೆ ಎಂದು ಸಾಹಿತಿ ಕುಂ. ವೀರಭದ್ರಪ್ಪ ಕಳವಳ ವ್ಯಕ್ತಪಡಿಸಿದರು.
ದೇಶದಲ್ಲಿ ಬೆರಳಣಿಕೆಯಷ್ಟಿದ್ದ ವೃದ್ಧಾಶ್ರಮಗಳ ಸಂಖ್ಯೆ ಕಳೆದ 10 ವರ್ಷಗಳಲ್ಲಿಯೇ 28 ಸಾವಿರಕ್ಕೆ ತಲುಪಿರುವುದು ಸಮಾಜದ ಅಂಧಃಪತನಕ್ಕೆ ಹಿಡಿದ ಕನ್ನಡಿ. ವೃದ್ಧಾಶ್ರಮದಲ್ಲಿರುವ ತಂದೆ-ತಾಯಿ ಅನಾಥರಲ್ಲ, ಅವರ ಮಕ್ಕಳು ಅಮೆರಿಕ, ಆಸ್ಟ್ರೇಲಿಯಾ, ಜರ್ಮನಿಯಲ್ಲಿದ್ದಾರೆ, ಆದರೆ ಯಾರೊಬ್ಬರು ತಂದೆ-ತಾಯಿ ಜತೆಗಿಲ್ಲ. ಹೀಗಾಗಿ ಮಕ್ಕಳಿಗೆ ಕಡ್ಡಾಯವಾಗಿ 1 ರಿಂದ 10 ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಕೊಡಿಸಬೇಕು ತಿಳಿಸಿದರು.

ಕನ್ನಡ ಅನ್ನದ ಭಾಷೆಯಾಗಲಿ

ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಹಿರಿಯ ಲೇಖಕಿ ಪ್ರೊ.ಭಾರತಿ ಪಾಟೀಲ ಮಾತನಾಡಿ, ಅಂತರಂಗದ ಭಾಷೆ ಕನ್ನಡವು ಅನ್ನದ ಭಾಷೆಯಾಗ ಬೇಕಾದರೆ ಕರ್ನಾಟಕದಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗವಕಾಶಗಳು ದೊರೆಯುವಂತಾಗಬೇಕು ಎಂದರು.
ಕನ್ನಡಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸ ಇದೆ. ಇಂಗ್ಲಿಷ್ ಕಲಿಕೆ ತಪ್ಪಲ್ಲ. ಆದರೆ ಅದರ ವ್ಯಾಮೋಹದಿಂದ ಕನ್ನಡವನ್ನು ದೂರವಿಟ್ಟವರನ್ನು ನಾವೆಂದೂ ಒಪ್ಪುವುದಿಲ್ಲ, ಕನ್ನಡ ಆಸ್ಮಿತೆಯ ವಿಷಯದಲ್ಲಿ ಯಾರೂ ಮೂಗು ತೂರಿಸುವಷ್ಟು ದೊಡ್ಡವರಲ್ಲ.ಯಾವ ಭಾಷೆಯ ಪ್ರಭಾವವೂ ಕನ್ನಡದ ಅಸ್ಮಿತೆಯನ್ನು ಕಸಿದುಕೊಳ್ಳಲು ಆಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಿಕ್ಷಣವೆಂದರೆ ಕೇವಲ ಕಾಗದದಲ್ಲಿ ನೀಡುವ ಡಿಗ್ರಿಗಳಲ್ಲ. ಬದುಕು ಕಟ್ಟಿಕೊಳ್ಳುವ, ದೇಶವನ್ನು ಚಲನಶೀಲತೆಯತ್ತ ಕೊಂಡೊಯ್ಯುವ, ಶಿಕ್ಷಣ ಮಾರ್ಗದ ಅಗತ್ಯವಿದೆ. ಖಾಸಗೀಕರಣ ಶಿಕ್ಷಣ ನೀತಿಯಿಂದ ಜನಸಾಮಾನ್ಯರು ಒದ್ದಾಡುವಂತಾಗಿದೆ. ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳೊಂದಿಗೆ ಪೈಪೋಟಿಯಲ್ಲಿ ಸೋತಿವೆ. ಸಂಬಳ ಬಂದರೆ ಸಾಕು ಎನ್ನುವ ಶಿಕ್ಷಕರ ಸಂಖ್ಯೆ ಜಾಸ್ತಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬಸವಾದಿ ಶರಣರ ಕೊಡುಗೆ ಅಪಾರ

ಸಮ್ಮೇಳನದ ಅಧ್ಯಕ್ಷತೆವಹಿಸಿದ್ದ ಶಾಸಕ ಎಂ.ಬಿ.ಪಾಟೀಲ ಮಾತನಾಡಿ, ಬಸವಾದಿ ಶರಣರು ವಚನ ಚಳವಳಿ ಮಾಡದೇ ಹೋಗಿದ್ದರೆ ಕನ್ನಡ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ, ಇದನ್ನು ಎಲ್ಲರೂ ಒಪ್ಪಲೇಬೇಕಾದ ಸಂಗತಿ. ಸಂಸ್ಕೃತಮಯವಾಗಿದ್ದ ನಾಡಿನಲ್ಲಿ ಬಸವಾದಿ ಶರಣರು ಆಡುಭಾಷೆಯಲ್ಲಿ ವಚನಗಳ ಮೂಲಕ ಕನ್ನಡವನ್ನು ಬಿತ್ತಿದರು. ಕಸಗುಡಿಸುವ ಕಾಯಕದಲ್ಲಿ ತೊಡಗಿದ್ದ ಸತ್ಯಕ್ಕ ಅವರೂ ವಚನ ಸಾಹಿತ್ಯವನ್ನು ರಚಿಸಿದರು, ಎಲ್ಲ ವರ್ಗದ ಕಾಯಕಜೀವಿಗಳು ವಚನಗಳನ್ನು ರಚಿಸಿದರು ಎಂದರು.
ವಚನಗುಮ್ಮಟ ಡಾ..ಗು. ಹಳಕಟ್ಟಿ ಅವರು ಇಲ್ಲದಿದ್ದರೆ ವಚನ ಸಾಹಿತ್ಯ ಬೆಳಕಿಗೆ ಬರುತ್ತಿರಲಿಲ್ಲ, ಮನೆಯ ಜಗುಲಿಯಲ್ಲಿ ಪೂಜಿಸಲ್ಪಡುತ್ತಿದ್ದ ವಚನ ಸಾಹಿತ್ಯದ ಕಟ್ಟುಗಳನ್ನು ಹಳಕಟ್ಟಿ ಅವರು ಸಂಗ್ರಹಿಸಿದ್ದು, ವಚನ ಸಾಹಿತ್ಯ ಉಳಿವಿಗೆ ಕಾರಣವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಮ್ಮೇಳನಕ್ಕೆ ಜಾತಿ-ರಾಜಕಾರಣವಿಲ್ಲ

ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಆಶಯ ನುಡಿಗಳನ್ನಾಡಿ, ಕನ್ನಡ ಸಮ್ಮೇಳನಗಳಿಗೆ ಯಾವುದೇ ಜಾತಿ-ರಾಜಕಾರಣ ಇರುವುದಿಲ್ಲ. ಸಂಸ್ಕೃತಿ, ಪರಂಪರೆ, ಆಚಾರ-ವಿಚಾರಗಳ ಪ್ರತಿಬಿಂಬ ಎಂದು ತಿಳಿಸಿದರು.
ಈ ಹಿಂದೆ ಸಾಹಿತ್ಯ ಸಮ್ಮೇಳನ ಮಾಡುವುದೆಂದರೆ ಗರ್ಭಿಣಿ ಪ್ರಸವಪೂರ್ವ ವೇದನೆ ಅನುಭವಿಸುವಂತಾಗುತ್ತಿತ್ತು. ಆರ್ಥಿಕ ಮುಗ್ಗಟ್ಟು, ಬೇರೆ ಅವರಿಂದ ಇನ್ನಿತರ ಅಪವಾದಗಳನ್ನು ಎದುರಿಸಬೇಕಿತ್ತು. ಇದೀಗ ಸರ್ಕಾರವೇ ಸಮ್ಮೇಳನಗಳಿಗೆ ಆರ್ಥಿಕ ಸಹಾಯ ಮಾಡುತ್ತಿದೆ. ತಾಲೂಕುಮಟ್ಟದ ಸಮ್ಮೇಳನಕ್ಕೆ 1 ಲಕ್ಷ ರೂ., ಜಿಲ್ಲಾಮಟ್ಟದ ಸಮ್ಮೇಳನಕ್ಕೆ 5 ಲಕ್ಷ ರೂ., ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೋಟ್ಯಂತರ ರೂ. ಹೀಗೆ ಆರ್ಥಿಕವಾಗಿ ಸರ್ಕಾರ ಹಣ ನೀಡುತ್ತಿದೆ ಎಂದು ವಿವರಿಸಿದರು.

ವಿಜೃಂಭಣೆಯಿಂದ ಮೆರವಣಿಗೆ

ಬಬಲೇಶ್ವರ ಪಟ್ಟಣದ ಹೃದಯಭಾಗ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಬೆಳಗ್ಗೆ 8 ಗಂಟೆಗೆ ಸಮ್ಮೇಳನದ ಸರ್ವಾಧ್ಯಕ್ಷೆ ಪ್ರೊ.ಭಾರತಿ ಪಾಟೀಲ ಅವರ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಈ ವೇಳೆ ಪ್ರಮುಖ ರಸ್ತೆಗಳಲ್ಲಿ ರಂಗೋಲಿ ಹಾಕಿ, ಪುಷ್ಪಗಳ ಸುರಿಮಳೆಗೈಯುವ ಮೂಲಕ ಸ್ವಾಗತ ಕೋರುವ ಮೂಲಕ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು, ಸಾಹಿತಿಗಳು, ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಡೊಳ್ಳುಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ನೆರೆದಿದ್ದ ಜನರ ಗಮನ ಸೆಳೆದವು.

ಗಮನ ಸೆಳೆದ ಗೋಷ್ಠಿಗಳು

ವಿಶ್ರಾಂತ ಪ್ರಾಚಾರ್ಯ ಡಾ.ಬಿ. ಜಗದೀಶ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಗೋಷ್ಠಿ ನಡೆಯಲ್ಲಿ ಡಾ.ಆನಂದ ಕುಲಕರ್ಣಿ ಅವರು ‘ಬಬಲೇಶ್ವರ ತಾಲೂಕು ಐತಿಹಾಸಿಕ ಹಿನ್ನೆಲೆ ಹಾಗೂ ಪರಂಪರೆ’, ಸಾಹಿತಿ ಅಶೋಕ ಹಂಚಲಿ ‘ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ’ ವಿಷಯದ ಕುರಿತು ಉಪನ್ಯಾಸ ನೀಡಿದರು. ಸಾಹಿತಿ ಡಾ.ಬನುದೇವಿ ಸಂಕಣ್ಣವರ, ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಬಸವರರಾಜ ಕೌಲಗಿ, ಶಿವಾನಂದ ಕೆಲೂರ, ಎಸ್.ಆರ್ ತಮಗೊಂಡ, ಡಿ.ಪಿ ಹಂಚಿನಾಳ, ಜೆ.ಕೆ ಕೋಟ್ಯಾಳ ಉಪಸ್ಥಿತರಿದ್ದರು.
ನಂತರ ಜಾನಪದ ಸಾಹಿತ್ಯ ಚಿಂತನ ಎಂಬ ಎರಡನೇ ಗೋಷ್ಠಿ ಡಾ.ಎ.ಎಂ. ಪಡಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದರು. ಜ್ಯೋರ್ತಿಲಿಂಗ ಹೊನಕಟ್ಟಿ ಅವರು ‘ಜನಪದದಲ್ಲಿ ಬದುಕು’, ಪ್ರೊ.ಎಸ್.ಜಿ. ಜಂಗಮಶೆಟ್ಟಿ ಅವರು ಜಾನಪದ ಗಾದೆಗಳಲ್ಲಿ ಜೀವನ ಸಂಸ್ಕೃತಿ ಕುರಿತು ಉಪನ್ಯಾಸ ನೀಡಿದರು. ಸಂಜೆ ಬಹಿರಂಗ ಅಧಿವೇಶನ ನಡೆಯಿತು.
ಬಬಲೇಶ್ವರ ಬೃಹನ್ಮಠದ ಡಾ.ಮಹಾದೇವ ಶಿವಾಚಾರ್ಯರು, ಮಮದಾಪುರ ವಿರಕ್ತಮಠದ ಶ್ರೀ ಮುರುಘೇಂದ್ರ ಸ್ವಾಮೀಜಿ, ನಿಡೋಣಿ ವಿರಕ್ತಮಠದ ಶ್ರೀ ಸಿದ್ಧಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಪಂ ಸದಸ್ಯ ಉಮೇಶ ಕೋಳಕೂರ, ಹಿರಿಯರಾದ ವಿ.ಎನ್. ಬಿರಾದಾರ, ಜಿಪಂ ಮಾಜಿ ಅಧ್ಯಕ್ಷ ವಿ.ಎಸ್. ಪಾಟೀಲ, ಸಮಾಜ ಸೇವಕ ಸಂಗಮೇಶ ಬಬಲೇಶ್ವರ, ಜಿಪಂ ಸದಸ್ಯೆಯರಾದ ಸುಜಾತಾ ಕಳ್ಳಿಮನಿ, ದಾನಮ್ಮ ಅಂಗಡಿ, ತಾಪಂ ಸದಸ್ಯ ಬೀರಪ್ಪ ಸೊಡ್ಡಿ, ಎಪಿಎಂಸಿ ಸದಸ್ಯ ಹಣಮಂತ ಲೋಕುರಿ, ಮುಖಂಡ ಶಾಶ್ವತ್ ಪಾಟೀಲ, ತಹಸೀಲ್ದಾರ ಎಂ.ಎಸ್.ಅರಕೇರಿ, ಕಸಾಪ ತಾಲೂಕು ಅಧ್ಯಕ್ಷ ಪ್ರೊ.ಮಹಾದೇವ ರೆಬಿನಾಳ, ಪ್ರೊ.ಮಲ್ಲಿಕಾರ್ಜುನ ಅವಟಿ, ಡಾ.ಮುರುಗೇಶ ಸಂಗಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net