ಜಗತ್ತಿಗೆ ಅರಿಷ್ಟ-ಆಳುವ ಪ್ರಭುವಿಗೆ ಸುಖ

VJP 25-4
Published on

ವಿಜಯಪುರ: ಮನಿಮನಿಗೆ, ಹಳ್ಳಿಹಳ್ಳಿಗೆ, ಓಣಿಓಣಿಗೆ, ಊರು ಊರಿಗೆ, ಪಟ್ಟಣ ಪಟ್ಟಣಕ್ಕೆ ಜಗಳ, ಉತ್ತಮ ದೇಶದ ಮರ್ಧನ, ವೈಶಾಖ ಜೇಷ್ಠ ಮಾಸದಲ್ಲಿ ಸ್ವಲ್ಪ ಭಿಕ್ಷಂ, ಸ್ವಲ್ಪ ತೇಜಿ ಆಗಲಿದೆ(ಬೆಲೆ ಏರಿಕೆ ಆಗಲಿದೆ), ಭೂಕಂಪ ಸಂಭವಿಸಲಿದೆ, ಆಳುವ ಪ್ರಭುಗಳು ಸುಖದಿಂದ ಇರುತ್ತಾರೆ….!
ಕರ್ನಾಟಕದಲ್ಲೇ ಕಾಲಜ್ಞಾನ ಹೇಳಿಕೆಗೆ ಹೆಸರಾದ ಬಬಲೇಶ್ವರ ತಾಲೂಕಿನ ಹೊಳೆಬಬಲಾದಿ ಚಂದ್ರಗಿರಿ ದೇವಿ ಮಠದ ಸದಾಶಿವ ಮುತ್ಯಾ ಹಾಗೂ ಚಿಕ್ಕಯ್ಯ ಅಜ್ಜ ಬರೆದಿಟ್ಟಿರುವ ಪ್ರಸಕ್ತ ಸಾಲಿನ (2020ನೇ ಸಾಲಿನ ಶಾರವರಿ ನಾಮ ಸಂವಸ್ತರ, ಫಲ ಶ್ರೀ ಶಖೆ 1941ರ) ಕಾಲಜ್ಞಾನದ ಹೈಲೈಟ್ಸ್ ಇದು.
ಕೃಷ್ಣಾ ನದಿಯಲ್ಲಿ ಮಂಗಳವಾರ ಮಿಂದು ಚಂದ್ರಗಿರಿದೇವಿ ಮಠದ ಸದಾಶಿವ ಮುತ್ಯಾನ ಗದ್ದುಗೆಗೆ ಬರುವವರೆಗೂ ಮಠದ ಪೀಠಾಧಿಪತಿ ಸಿದ್ರಾಮಯ್ಯ ಹೊಳಿಮಠ ಅವರು ನುಡಿದ ಕಾರ್ಣಿಕ ಪ್ರಪಂಚದ ವಿದ್ಯಮಾನಗಳ ಸ್ಥಿತಿಗತಿ ಕುರಿತು ಮುನ್ಸೂಚನೆ ನೀಡಿತು.
ಕಾರುಮಳೆ, ಕಾರಜೋಳ ಕಾಡಗಿಚ್ಚು, ಚೈತ್ರದಲ್ಲಿ ಸುಕಾಲ, ಕಿಂಚಿತ್ತು ಮಳೆ ಬೆಳೆ ಮುತ್ಯಾ ಕೊಡುತ್ತಾನೆ, ಜಗತ್ತಿಗೆ ಮಹಾ ಅರಿಷ್ಟ(ಅನಿಷ್ಟ), ಲೋಕಕ್ಕೆ ಮಹಾ ಅರಿಷ್ಟ….ಆಳುವ ಪ್ರಭುಗಳು ಸುಖದಿಂದ ಇರುತ್ತಾರೆ. ಆಂಧ್ರ, ತೆಲಂಗಾಣ ಅಸೂಯೆ ರಾಜಕಾರಣ, ಭಾಗೀರತಿ ದೇಶಕ್ಕೆ ಬರಗಾಲ, ನಾ ಎಂದವರು ಉರಿದು ಹೋಗುತ್ತಾರೆ, ಮನಿಮನಿಗೆ, ಹಳ್ಳಿಹಳ್ಳಿಗೆ, ಓಣಿಓಣಿಗೆ, ಊರು ಊರಿಗೆ, ಪಟ್ಟಣಪಟ್ಟಣಕ್ಕೆ ಜಗಳ, ಉತ್ತಮ ದೇಶದ ಮರ್ಧನ, ವೈಶಾಖ ಜೇಷ್ಠ ಮಾಸದಲ್ಲಿ ಸ್ವಲ್ಪ ಭಿಕ್ಷಂ, ಸ್ವಲ್ಪ ತೇಜಿ ಆಗಲಿದೆ(ಬೆಲೆ ಏರಿಕೆ ಆಗಲಿದೆ), ಭೂಕಂಪ ಸಂಭವಿಸಲಿದೆ. ಚೈತ್ರ, ವೈಶಾಖ, ಜೇಷ್ಠ ಮಾಸಗಳಲ್ಲಿ ಸುಭಿಕ್ಷಂ. ಸುಮ್ಮನೆ ವೈರಿಗಳ ವಿನಾಶ. ನಮ್ಮ ರಾಜ್ಯದಿಂದ ಹಾಳುಕಂ(ಹಾಳಾಗಲಿದೆ). ಮಹಾಮಳೆ ಆದೀತು, ಮುಂಗಾರಿ ಮಳೆ ಒಂಬತ್ತಾಣೆ, ಹಿಂಗಾರಿ ಮಳೆ ಒಂಬತ್ತಾಣೆ ಎಂದರು.

ಮದ್ಯದ ನೈವೇದ್ಯ

ಜಾತ್ರೆಯ ಮೂರನೇ ದಿನವಾದ ಮಂಗಳವಾರ ಮಹಾಪ್ರಸಾದ ನೆರವೇರಿತಲ್ಲದೆ ಭಕ್ತರಿಂದ ಗದ್ದುಗೆಗೆ ಮದ್ಯದ ನೈವೇದ್ಯ ಸಮರ್ಪಣೆಗೊಂಡಿತು. ಸಿದ್ಧಿ ಪುರುಷರಾಗಿದ್ದ ಸದಾಶಿವ ಮುತ್ಯಾ ಹಾಗೂ ಚಿಕ್ಕಯ್ಯ ಅಜ್ಜ ಮದ್ಯ ಸೇವಿಸುತ್ತಿದ್ದರೆಂಬ ಕಾರಣಕ್ಕೆ ಮದ್ಯ ಅರ್ಪಿಸುವ ಪದ್ಧತಿ ಬೆಳೆದು ಬಂದಿದ್ದು, ಭಕ್ತರು ಮದ್ಯ ಸಮರ್ಪಿಸಿ ಅದನ್ನೇ ತೀರ್ಥವಾಗಿ ಸೇವಿಸಿದರು. ಜಾತ್ರೆಯಲ್ಲಿ ತರಹೇವಾರಿ ಬ್ರಾೃಂಡ್‌ಗಳ ಮದ್ಯವನ್ನು ಭಕ್ತರು ಖರೀದಿಸಿ ಪೂಜ್ಯನೀಯ ಭಾವದಿಂದ ದೇವರಿಗೆ ಸಮರ್ಪಿಸಿದ್ದು ಕಂಡು ಬಂತು. ರಾತ್ರಿ ಬಯಲಾಟ ಹಾಗೂ ಡಪ್ಪಿನ ಪದಗಳ ಕಾರ್ಯಕ್ರಮ ನೆರವೇರಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net