ಬಾಬಾ ಸಾಹೇಬರು ಕಂಡ ಕಲ್ಪನೆಗೆ ಸೋಲು: ಸಾಹಿತಿ ಪ್ರೊ.ರಹಮತ್ ತರೀಕೆರೆ ವಿಷಾಧ

21
Published on

ಮೈಸೂರು: ದೇಶದಲ್ಲಿ ನಾವಿಂದು ಡಾ.ಬಾಬಾ ಸಾಹೇಬರನ್ನು ವೈಭವೀಕರಿಸುವ ಭರದಲ್ಲಿ ಅವರು ಕಂಡ ಕನಸಿನ ಭಾರತದ ಕಲ್ಪನೆಯನ್ನು ಸೋಲಿಸುತ್ತಿದ್ದೇವೆ ಎಂದು ಸಾಹಿತಿ ಪ್ರೊ.ರಹಮತ್ ತರೀಕೆರೆ ವಿಷಾದಿಸಿದರು.

ಮೈಸೂರು ವಿಶ್ವ ವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದಿಂದ ಸೋಮವಾರ ಮಾನಸ ಗಂಗೋತ್ರಿಯ ವಿಶ್ವಜ್ಞಾನಿ ಸಭಾಂಗಣದಲ್ಲಿ ಆಯೋಜಿಸಿದ್ದ 134ನೇ ಅಂಬೇಡ್ಕರ್ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಂವಿಧಾನ ಆಶಯ ಜಾರಿಯಾಗುತ್ತಿದೆಯೇ? ಎಂಬ ಪ್ರಶ್ನೆಯನ್ನು ಸಮಕಾಲೀನ ಸಮಾಜ ಕೇಳಿಕೊಳ್ಳಬೇಕಿದೆ ಎಂದರು.

ಅನೇಕರು ಸಂವಿಧಾನ ಉಳಿಸುವ ಆಂದೋಲನ ನಡೆಸುತ್ತಿದ್ದಾರೆ. ಯಾಕೇ ಉಳಿಸಿಕೊಳ್ಳಬೇಕು? ಎನ್ನುವ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ದುರಂತವೆಂದರೆ ಈ ನೆಲದಲ್ಲಿ ಸಂವಿಧಾನ ಉಳಿಸಿ ಆಂದೋಲನ ಹುಟ್ಟುವುದೇ ವಿಚಿತ್ರ ಎಂದರು.

ಶಿಕ್ಷಣ, ಚಿಂತನೆ, ಸಂಶೋಧನೆ ನಮ್ಮ ಅಸ್ತ್ರ ಎಂದು ಬಾಬಾ ಸಾಹೇಬರು ಹೇಳುತ್ತಿದ್ದರು. ಈ ನಿಟ್ಟಿನಲ್ಲಿ ವಿವಿಯ ವಿದ್ಯಾರ್ಥಿಗಳು ಅಧ್ಯಯನ ನಡೆಸಬೇಕು. ಜ್ಞಾನ, ವಿವೇಕ, ಸಂವೇದನಾಶೀಲತೆ, ಮಾನವೀಯತೆ, ಸಾಮಾಜಿಕ ಕಾಳಜಿಯನ್ನು ವಿಶ್ವ ವಿದ್ಯಾನಿಲಯ ಕಲಿಸಬೇಕು. ಜ್ಞಾನದ ವ್ಯಾಖ್ಯಾನ ಅರ್ಥ ಮಾಡಿಕೊಳ್ಳಬೇಕೆಂದರೆ ಬಾಬಾ ಸಾಹೇಬರನ್ನು ಓದಬೇಕು ಎಂದರು.

ಸಂವಿಧಾನ ಬಂದು 75 ವರ್ಷ ಕಳೆದಿವೆ. ಡಾ.ಬಿ.ಆರ್.ಅಂಬೇಡ್ಕರ್ ಸಮಗ್ರ ಸಂಪುಟಗಳು ಬಂದು ಎಷ್ಟೋ ವರ್ಷಗಳಾಗಿವೆ. ಆದರೂ ಭಾರತ ಜ್ಞಾನ ಸಂಪಾದಿಸುವ ದೇಶವಾಗಿಲ್ಲ. ಜ್ಞಾನ ವಿರೋಧಿ ಸಮಾಜ ಆಗುತ್ತಿದೆಯೇ ಎಂಬ ಪ್ರಶ್ನೆ ಎದುರಾಗಿದೆ ಎಂದು ಹೇಳಿದರು.

ದೇಶದಲ್ಲಿ ಸಹನಶೀಲತೆ ಇಲ್ಲವಾಗಿದೆ. ಅಂಬೇಡ್ಕರ್ ಬಯಸಿದ ಭಾತೃತ್ವ ಕಳೆದು ಹೋಗುತ್ತಿದೆ. ಧರ್ಮದ ಅಸಹನೆ ಬೆಳೆಯುತ್ತಿದೆ. ಚಿಂತಕರನ್ನು ಕೊಲೆ ಮಾಡಲಾಗುತ್ತಿದೆ. ಲೇಖಕರನ್ನು ಹೀಯಾಳಿಸುತ್ತಿದ್ದೇವೆ. ಬಾಬಾ ಸಾಹೇಬರ ಮೌಲ್ಯವನ್ನು ಘಾಸಿಗೊಳಿಸಿದ್ದೇವೆ ಎಂದು ನುಡಿದರು.

ಅಂಬೇಡ್ಕರ್ ಅವರನ್ನು ಸಂವಿಧಾನ, ಮೀಸಲಾತಿಗೆ ಸೀಮಿತ ಮಾಡುವುದು ಮಹಾ ಆತ್ಮ ಘಾತುಕವಾದದ್ದು. ಅವರ ಜ್ಞಾನ ಇಡೀ ಭಾರತಕ್ಕೆ ಬೇಕಾಗಿದೆ. ಸಂವಿಧಾನಬದ್ಧವಾಗಿ ಕೊಡಲಾದ ಮೀಸಲಾತಿ ಬಗ್ಗೆ ಪ್ರಶ್ನೆ ಮಾಡಲಾಗುತ್ತದೆ. ಸಂವಿಧಾನ ಮಾನ್ಯವಿಲ್ಲದ್ದನ್ನು ಒಪ್ಪಿಕೊಳ್ಳಲಾಗುತ್ತಿದೆ ಎಂದರು.

ರಾಜಕೀಯ ಪಕ್ಷಗಳು ಭಾರತ ರತ್ನ ಕೊಟ್ಟಿದ್ದು ನಾವು, ಚುನಾವಣೆಯಲ್ಲಿ ಸೋಲಿಸಿದ್ದು ನೀವು ಇತ್ಯಾದಿ ಆರೋಪಗಳಲ್ಲಿ ನಿರತವಾಗಿವೆ. ಆದರೆ ಈ ಪಕ್ಷಗಳು ಕಚ್ಚಾಟ ಬಿಟ್ಟು ಬಾಬಾ ಸಾಹೇಬರ ಕನಸು, ಆಶಯ ಈಡೇರಿಸಲು ಮನಸ್ಸು ಮಾಡುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು.

ಕರ್ನಾಟಕ ಹೈಕೋರ್ಟ್‌ನ ವಿಶ್ರಾಂತ ನ್ಯಾಯಾಧೀಶ ಎಲ್.ನಾರಾಯಣಸ್ವಾಮಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಾವು ಇಂದು ಏನೇ ಆಗಿದ್ದರೂ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಕಾರಣ. ಜೀವನ ಪ್ರತಿ ಕ್ಷಣ ಅವರನ್ನು ನೆನೆಯಬೇಕು ಎಂದು ಸ್ಮರಿಸಿದರು.

ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿವಿ ಕುಲಸಚಿವೆ ಎಂ.ಕೆ.ಸವಿತಾ, ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜ, ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಸೋಮಶೇಖರ್, ಗಾಂಧಿ ಅಧ್ಯಯನ ವಿಭಾಗದ ಡಾ.ನರೇಂದ್ರಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net