ಗದ್ದೆಗಿಳಿದು ನಾಟಿ ಮಾಡಲಿರುವ ಬಿ.ವೈ.ವಿಜಯೇಂದ್ರ: ಕೊತ್ತತ್ತಿ ಗ್ರಾಮದಲ್ಲಿ ಸಕಲ ಸಿದ್ಧತೆ

B.Y. Vijayendra will plant paddy Mandya
Published on

ಮಂಡ್ಯ: ರೈತರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾ.4ರಂದು ತಾಲೂಕಿನ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕೊತ್ತತ್ತಿ ಗ್ರಾಮದಲ್ಲಿ ಭತ್ತ ನಾಟಿ ಹಾಕಲಿದ್ದಾರೆ. ಇದಕ್ಕಾಗಿ ಯುವ ಮುಖಂಡ ಇಂಡುವಾಳು ಸಚ್ಚಿದಾನಂದ ನೇತೃತ್ವದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಭಾನುವಾರ ಪರಿಶೀಲನೆ ನಡೆಸಿದರು.

ಭತ್ತ ನಾಟಿ ಕಾರ್ಯಕ್ರಮ ನಡೆಯಲಿರುವ ಕೊತ್ತತ್ತಿ ಗ್ರಾಮದ ಹೊರವಲಯದಲ್ಲಿ ರೈತರಾದ ಸುಖೇಂದ್ರ ಮತ್ತು ಶಿವಬಸಪ್ಪ ಅವರ ಜಮೀನಿನಲ್ಲಿ ನಡೆಯುತ್ತಿರುವ ಸಿದ್ಧತಾ ಕಾರ್ಯ ಪರಿಶೀಲನೆ ನಡೆಸಿ ಮಾತನಾಡಿದ ಸಚ್ಚಿದಾನಂದ, ರೈತರಿಗೆ ಆತ್ಮಸ್ಥೈರ್ಯ ತುಂಬುವ ಹಾಗೂ ಕೃಷಿಯಿಂದ ದೂರ ಸರಿಯುತ್ತಿರುವ ರೈತರನ್ನು ಮತ್ತೆ ಕೃಷಿ ಯಂತ್ರ ಮರಳುವಂತೆ ಪ್ರೇರೇಪಿಸುವ ಸಲುವಾಗಿ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಭತ್ತ ನಾಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಹಿಂದೆ ಬಿಜೆಪಿ ಸರ್ಕಾರವು ಅಧಿಕಾರದಲ್ಲಿದ್ದಾಗ ರೈತರಿಗಾಗಿ ಹತ್ತಾರು ಕಾರ್ಯಕ್ರಮ ರೂಪಿಸಿತ್ತು. ಕೇಂದ್ರ ಸರ್ಕಾರದ ಮಾದರಿಯಲ್ಲೇ ರೈತರಿಗೆ ಕೃಷಿ ಸವ್ಮಾನ್ ಯೋಜನೆಯಡಿ 4000 ರೂ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಇದಲ್ಲದೆ ರೈತರ ಮಕ್ಕಳಿಗಾಗಿ ವಿದ್ಯಾಸಿರಿ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಮೊದಲ ಬಾರಿಗೆ ಪ್ರತ್ಯೇಕವಾಗಿ ಕೃಷಿ ಬಜೆಟ್ ಮಂಡಿಸಿದ್ದರು. ಆದರೆ, ಈಗ ಕಾಂಗ್ರೆಸ್ ಸರ್ಕಾರವು ಬಿಜೆಪಿ ಜಾರಿಗೊಳಿಸಿದ್ದ ರೈತ ಪರ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ. ಹೀಗಾಗಿ ರೈತರು ಸಂಕಷ್ಟಕ್ಕೆ ಸಿಲುಕುವ ಜತೆಗೆ ಆರ್ಥಿಕ ನಷ್ಟಕ್ಕೂ ಒಳಗಾಗುತ್ತಿದ್ದಾರೆ. ಪರಿಣಾಮ ಎಷ್ಟೋ ಜನ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಹೀಗಾಗಿ ಅವರನ್ನು ಮತ್ತೆ ಕೃಷಿಗೆ ಮರಳಿ ಕರೆ ತರುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಇದಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ಇದಕ್ಕೆ ಪೂರಕವಾಗಿ ಜಿಲ್ಲೆಯಲ್ಲಿ ಭತ್ತ ನಾಟಿ ಕಾರ್ಯಕ್ರಮದ ಮೂಲಕ ಚಾಲನೆ ನೀಡುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷರ ಜತೆಗೆ ಪಕ್ಷದ ಹಲವಾರು ನಾಯಕರು, ಮುಖಂಡರು ಭತ್ತ ನಾಟಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 6 ರಿಂದ 7 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಕೊತ್ತತ್ತಿ ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ವಿಶೇಷವಾಗಿ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ದೇವಾಲಯ ಕಾರ್ಯ ಹಾಗೂ ಹಬ್ಬ ಹರಿದಿನಗಳಲ್ಲಿ ನಡೆಯುವಂತೆ ರಾಗಿ ಮುದ್ದೆ-ಅವರೆಕಾಳು ಕೂಟು, ಅನ್ನ-ಸಾಂಬಾರ್ ಊಟದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಒಂದೂವರೆಯಿಂದ ಎರಡು ಎಕರೆ ಪ್ರದೇಶದಲ್ಲಿ ಅಂದು ಭತ್ತ ನಾಟಿ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ಸ್ಥಳೀಯ ರೈತರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಪಕ್ಷದ ನಾಯಕರು ಕೃಷಿ ಸಂಬಂಧ ಸಮಾಲೋಚನೆ ನಡೆಸಲಿದ್ದಾರೆ. ಮಾ.4ರಂದು ನಾಟಿಯಾಗಲಿರುವ ಭತ್ತ ಕೊಯ್ಲಿಗೆ ಬಂದಾಗ ಪುನಃ ನಮ್ಮ ಇದೇ ನಾಯಕರು ಕೊಯ್ಲು ಪ್ರಕ್ರಿಯೆಯಲ್ಲೂ ಭಾಗವಹಿಸುವರು ಎಂದು ವಿವರಿಸಿದರು.

ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಸಿದ್ದರಾಮಯ್ಯ, ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಶ್ರೀರಂಗಪಟ್ಟಣ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್, ಶ್ರೀರಂಗಪಟ್ಟಣ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀಧರ್, ಬೇವಿನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಶ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net