ಬಂಡಾಯ ಸ್ಪರ್ಧೆ ಯಾವುದೇ ಪರಿಣಾಮ ಬೀರದು- ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

images
Published on



ಮಂಗಳೂರು : ವಿಧಾನ ಪರಿಷತ್‌ನ ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯ ಕೆಲವರು ಪಕ್ಷದ ವಿರುದ್ಧವಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಬಿಜೆಪಿ ಹಾಗೂ ಮೈತ್ರಿ ಅಭ್ಯರ್ಥಿ ಗೆಲುವಿಗೆ ಇದರಿಂದ ಯಾವುದೇ ಪರಿಣಾಮ ಆಗಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಮಂಗಳೂರಿನಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು ‘ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರ ಗುರಿ ಸ್ಪಷ್ಟವಾಗಿದೆ. ಮತದಾರರನ್ನು ಪರಿಣಾಮಕಾರಿಯಾಗಿ ತಲುಪುತ್ತಿದ್ದಾರೆ. ಪ್ರಬುದ್ಧ ಮತದಾರರು ಬಿಜೆಪಿ ಹಾಗೂ ಮೈತ್ರಿ ಅಭ್ಯರ್ಥಿಗಳ ಮೇಲೆ ವಿಶ್ವಾಸ ಇರಿಸಿದ್ದಾರೆ. ಈ ಚುನಾವಣೆಯಲ್ಲಿ ಗೆಲುವಿನ ಅಂತರ ಇನ್ನಷ್ಟು ಹೆಚ್ಚಳವಾಗಲಿದೆ ಎಂದರು.
ಬಂಡಾಯ ಸ್ಪರ್ಧಿಗಳು ತಾವು ಬಿಜೆಪಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಯಾರೇನೇ ಹೇಳಿದರೂ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಸಾಧ್ಯವಿಲ್ಲ. ಬಿಜೆಪಿ ಮೈತ್ರಿ ಅಭ್ಯರ್ಥಿಗಳಾದ ಭೋಜೇಗೌಡ ಹಾಗೂ ಡಾ. ಧನಂಜಯ ಸರ್ಜಿ ಅವರು ದೊಡ್ಡ ಅಂತರದಿಂದ ಜಯ ಸಾಧಿಸುವ ಸಂಪೂರ್ಣ ವಿಶ್ವಾಸವಿದೆ ಎಂದರು.
* ವರಿಷ್ಠರ ತೀರ್ಮಾನ ಅಂತಿಮ:
ವಿಧಾನ ಪರಿಷತ್‌ನ ಮೂರು ಸ್ಥಾನಗಳಿಗೆ ಅನೇಕ ಹೆಸರುಗಳಿವೆ. ಜಾತಿವಾರು, ಪ್ರಾಂತ್ಯವಾರು ಎಲ್ಲವನ್ನೂ ಗಮನದಲ್ಲಿರಿಸಿ ಹೆಸರುಗಳನ್ನು ದೆಹಲಿಗೆ ಕಳುಹಿಸಿಕೊಟ್ಟಿದ್ದೇವೆ. ಪಕ್ಷದ ವರಿಷ್ಠರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಸರ್ಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಖಂಡನೀಯ. ಬೆಳ್ತಂಗಡಿಯಲ್ಲಿ ವಿನಾಕಾರಣ ಬಿಜೆಪಿ ಕಾರ್ಯಕರ್ತರನ್ನು, ಯುವಮೋರ್ಚಾ ಅಧ್ಯಕ್ಷರ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸಲಾಗಿದೆ. ಇದರ ವಿರುದ್ಧ ನಾವು ಹೋರಾಟ ಮಾಡುತ್ತೇವೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net