ಶಿಕಾರಿಪುರದಲ್ಲಿ ಬಿ.ವೈ.ವಿಜಯೇಂದ್ರ ಜನಸ್ಪಂದನೆ; ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಭರವಸೆ

7 ಎಸ್ಕೆಪಿ 1d
ಶಾಸಕ ಬಿ.ವೈ.ವಿಜಯೇಂದ್ರ ಶಿಕಾರಿಪುರದ ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಅಹವಾಲು ಸ್ವೀಕರಿಸಿದರು.
Published on

ಶಿಕಾರಿಪುರ: ಸ್ವಚ್ಛ, ಸುಂದರ ಮತ್ತು ಸ್ವಾಸ್ಥ್ಯಪೂರ್ಣ ಶಿಕಾರಿಪುರ ನಮ್ಮ ಆದ್ಯತೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಂಸದ ಬಿ.ವೈ.ರಾಘವೇಂದ್ರ ಸಾಕಷ್ಟು ಅನುದಾನ ತಂದು ಗಮನ ಸೆಳೆಯುವಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಶಿಕಾರಿಪುರ ಒಂದು ಮಾದರಿ ಪಟ್ಟಣವಾಗಬೇಕೆಂಬ ತಂದೆಯವರ ಕನಸು ನನಸಾಗುವ ನಿಟ್ಟಿನಲ್ಲಿ ಸಾಗುತ್ತಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ಸೋಮವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸ್ಥಳೀಯರ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಿ ಅವರು ಮಾತನಾಡಿ, ಕಳೆದ ತಿಂಗಳಿನಲ್ಲಿ ಕ್ಷೇತ್ರದ ಬಹುತೇಕ ಗ್ರಾಪಂ, ಶಿರಾಳಕೊಪ್ಪ ಪುರಸಭೆ ಸೇರಿದಂತೆ ಹಲವು ಕಡೆಗಳಲ್ಲಿ ಸಾರ್ವಜನಿಕರಿಂದ ಕುಂದು-ಕೊರತೆ ಸ್ವೀಕಾರ ಹಮ್ಮಿಕೊಳ್ಳಲಾಗಿತ್ತು. ಸರ್ವೇ, ಕಂದಾಯ, ಕೃಷಿ, ಶಿಕ್ಷಣ, ಆರೋಗ್ಯ ಸೇರಿದಂತೆ ಸಾಕಷ್ಟು ಇಲಾಖೆಗಳ ಬಗ್ಗೆ ಸಾರ್ವಜನಿಕರಿಂದ ಸಮಸ್ಯೆಗಳ ಪರಿಹಾರಕ್ಕೆ ಅರ್ಜಿಗಳು ಬಂದಿದ್ದವು. ಕಾನೂನಿನ ಚೌಕಟ್ಟಿನೊಳಗೆ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಜೂನ್‌ನಲ್ಲಿ ಮಳೆ ಸಾಕಷ್ಟು ಬಾರದೇ ರೈತರು ಸಣ್ಣ ಮಳೆಗೆ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಜುಲೈನಲ್ಲಿ ಹಿಡಿದ ಮಳೆಯಿಂದ ಮೆಕ್ಕೆಜೋಳ ಜೌಗಾಗಿದೆ. ಇದರಿಂದ ಸರಿಯಾದ ಇಳುವರಿ ಮತ್ತು ಗುಣಮಟ್ಟ ಬಾರದೇ ಇರುವದರಿಂದ ರೈತರಿಗೆ ತೊಂದರೆ ಆಗುತ್ತಿದೆ. ಹಲವು ಕಡೆಗಳಲ್ಲಿ ಮೆಕ್ಕೆಜೋಳ ಕಳೆಗೂಡಿ ಹೋಗಿದೆ. ರೈತರು ಬೆಳೆಗಳಿಗೆ ಸೂಕ್ತವಾದ ಸಮಯದಲ್ಲಿ ಬೆಳೆ ವಿಮೆ ಮಾಡಿಸಿದರೆ ಸಹಕಾರಿಯಾಗುತ್ತದೆ. ಬೆಳೆ ಪರಿಹಾರದ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದ್ದೇನೆ ಎಂದು ತಿಳಿಸಿದರು.
ಸಕಾಲದಲ್ಲಿ ಮಳೆ ಬಾರದೆ ಇರುವುದರಿಂದ ಹೊಸಳ್ಳಿ ಏತ ನೀರಾವರಿ ಯೋಜನೆಯಿಂದ ರೈತರ ಜೀವನಾಡಿಯಾದ ಅಂಜನಾಪುರ ಜಲಾಶಯಕ್ಕೆ ನೀರು ಬಿಡಲಾಗಿತ್ತು. ಯಡಿಯೂರಪ್ಪ ಅವರು ರೈತರ ಅನುಕೂಲಕ್ಕಾಗಿ ಉಡುಗಣಿ, ತಾಳಗುಂದ ಹೋಬಳಿಗೆ 850 ಕೋಟಿ ರೂ. ವೆಚ್ಚದಲ್ಲಿ ಕೆರೆ ತುಂಬುವ ಯೋಜನೆ, ಕಪ್ಪನಹಳ್ಳಿಯಲ್ಲಿ ಕುಮದ್ವತಿ-ವೃಷಭಾವತಿ ಸಂಗಮದಲ್ಲಿ ಏತ ನೀರಾವರಿ ಯೋಜನೆಗೆ ಅನುದಾನ ನೀಡಿ ಅನುಷ್ಠಾನಗೊಳಿಸಿದ್ದಾರೆ. ಎರಡು ರಾಜ್ಯ ಹೆದ್ದಾರಿಗಳು ತಾಲೂಕಿನಲ್ಲಿ ಹಾಯ್ದು ಹೋಗಿದ್ದು, ರೈಲ್ವೆ ಯೋಜನೆ ತಾಲೂಕಿಗೆ ಹೆಮ್ಮೆಯ ಗರಿಯಾಗಲಿದೆ. ಹೊಸ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಮತ್ತು ಸುಸಜ್ಜಿತ ಬಸ್‌ನಿಲ್ದಾಣದಿಂದ ಜನತೆಗೆ ಅನುಕೂಲವಾಗಿದೆ ಎಂದು ಹೇಳಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ನಿಂಬೆಗೊಂದಿ ಸಿದ್ದಲಿಂಗಪ್ಪ, ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net