

ಚಿತ್ರದುರ್ಗ: ಶಿರಾ ವಿಧಾನ ಸಭಾ ಉಪಚುನಾವಣೆಯಲ್ಲಿ ಬಿಜೆಪಿ ಪರವಾದ ಸುನಾಮಿ ಅಲೆ ಎದ್ದಿದೆ ಎಂದು ರಾಜ್ಯಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಶ್ರೀ ಬಸವ ಮೂರ್ತಿ ಮಾದಾರ ಚನ್ನಯ್ಯ ಗುರುಪೀಠಕ್ಕೆ ಗುರುವಾರ ಭೇಟಿ ನೀಡಿ, ಶ್ರೀ ಮಾದಾರ ಚನ್ನಯ್ಯ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
ಶಿರಾದಲ್ಲಿ ಬದಲಾವಣೆ ಗಾಳಿ ಬೀಸಿದ್ದು,ಎಲ್ಲ ಸಮುದಾಯಗಳ ಬೆಂಬಲ ಸಿಕ್ಕಿದ್ದು,ಈ ಬಾರಿ ಅಲ್ಲಿ ಕಮಲ ಅರಳುವುದು ಶತಸಿದ್ಧ. ರಾಜ್ಯಸರ್ಕಾರದ ಅಭಿವೃದ್ಧಿ ಕೆಲಸಗಳ ಆಧಾರದಲ್ಲಿ ಇಬ್ಬರು ಡಿಸಿಎಂಗಳ ಸಹಿತ ನಮ್ಮೆಲ್ಲ ಪಕ್ಷದ ಪ್ರಮುಖರು, ಕಾರ್ಯಕರ್ತರು ನಡೆಸುತ್ತಿರುವ ಸಂಘಟಿತ ಪ್ರಯತ್ನ ಶಿರಾದಲ್ಲಿ ಗೆಲುವನ್ನು ತಂದುಕೊಡಲಿದೆ ಎಂದರು.
ವಿಜಯೇಂದ್ರ ಅಕ್ರಮ ಹಣ ಸುರಿದು ಚುನಾವಣೆ ನಡೆಸುತ್ತಿದ್ದಾರೆಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಯನ್ನು ಅಲ್ಲಗಳೆದ ಅವರು, ಚುನಾವಣೆ ಫಲಿತಾಂಶ ಕುರಿತಂತೆ ಪ್ರತಿಪಕ್ಷ ನಾಯಕರಲ್ಲಿ ಹತಾಶೆ ಕಾಣಿಸಿದೆ. ನಿದ್ರೆಗೆಟ್ಟಿರುವ ಈ ನಾಯಕರು ಈಗಾಗಲೇ ಸೋಲು ಒಪ್ಪಿಕೊಂಡಿದ್ದಾರೆ. ಪ್ರತಿಪಕ್ಷಗಳಲ್ಲಿ ನಡುಕು ಹುಟ್ಟಿದ್ದು, ಸಲ್ಲದ ಹೇಳಿಕೆಗಳು ಯಾರಿಗೂ ಶೋಭೆ ತರದು ಎಂದು ತಿಳಿಸಿದರು.
ಶಾಸಕ ಬಸವಗೌಡ ಯತ್ನಾಳ್ ಹೇಳಿಕೆಗೆ ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆಂದು ಹೇಳುವ ಮೂಲಕ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಯಡಿಯೂರಪ್ಪ ತಮ್ಮ ಅವಧಿ ಪೂರ್ಣಗೊಳಿಸುತ್ತಾರೆಂದು ಪಕ್ಷದ ಅಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಹೇಳಿದ್ದಾರೆ ಎಂದರು.
ನಂತರ ಜಯೇಂದ್ರ ಅವರು ನಗರದ ಶ್ರೀಯಾದವ ಗುರುಪೀಠದ ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ ಹಾಗೂ ಇಮ್ಮಡಿ ಸಿದ್ದ ರಾಮೇಶ್ವರ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ,ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ರಾಜ್ಯರೈತ ಮೋರ್ಚಾ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ,ಮುಖಂಡರಾದ ಸಂಪತ್‌ಕುಮಾರ್, ಮಲ್ಲಿಕಾರ್ಜುನ್, ಶಿವಪ್ರಕಾಶ್ ದಗ್ಗೆ,ನಾಗರಾಜ್ ಬೇದ್ರೆ,ಶಿವಣ್ಣಾಚಾರ್,ನಗರಸಭೆ ಸದಸ್ಯೆ ಸುರೇಶ್ ಮತ್ತಿತರರು ಇದ್ದರು.