

ಮಂಡ್ಯ: ಕಬ್ಬು ಹಾಗೂ ಹಾಲಿಗೆ ವೈಜ್ಞಾನಿಕ ದರ ನಿಗದಿ ಮಾಡುವಂತೆ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ನೂರು ದಿನ ಪೂರೈಸಿದೆ. ಆದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮ್ಮ ಹೋರಾಟಕ್ಕೆ ಸ್ಪಂದಿಸುತ್ತಿಲ್ಲವೆಂದು ರೈತರು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ದೂರು ಹೇಳಿದರು.
ತಾಲೂಕಿನ ಮಾಚಹಳ್ಳಿಗೆ ತೆರಳುವ ಮಾರ್ಗಮಧ್ಯೆ ಹೊಳಲು ಗ್ರಾಮದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಈ ವೇಳೆ ಹಲವು ರೈತರು ತಮ್ಮ ಅಸಮಾಧಾನ ತೋಡಿಕೊಂಡರು. ಬಿ.ಎಸ್.ಯಡಿಯೂರಪ್ಪ ಅವರು ನಮ್ಮ ಸಮಸ್ಯೆ ಬಗ್ಗೆ ಗಮನಕೊಟ್ಟಿದ್ದರು. ಆದರೆ ಬಸವರಾಜ ಬೊಮ್ಮಾಯಿ ಗಮನಕೊಡುತ್ತಿಲ್ಲ. ನಿಮ್ಮ ಕೈ ಮುಗಿದು ಕಳಕಳಿಯಿಂದ ಕೇಳಿ ಕೊಳ್ಳುತ್ತೇವೆ. ನೀವಾದರೂ ಗಮನಕೊಟ್ಟು, ನಮ್ಮ ಹೋರಾಟಕ್ಕೆ ಸ್ಪಂದಿಸಿ. ಕಳೆದ ನೂರಾರು ದಿನಗಳಿಂದ ನಿರಂತರ ಹೋರಾಟ ಮಾಡುತ್ತಿದ್ದೇವೆ. ಅಹೋರಾತ್ರಿ ಧರಣಿ, ಉಪವಾಸ ಸತ್ಯಾಗ್ರಹ ಕೂಡ ಮಾಡಲಾಗಿದೆ. ಆದರೂ ನಮ್ಮ ಬೇಡಿಕೆಗಳನ್ನ ಈಡೇರಿಸಿಲ್ಲ ಎಂದು ವಿವರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಕಾಂಗ್ರೆಸ್ ಮತ್ತು ಜೆಡಿಎಸ್ ಬಗ್ಗೆ ಮಂಡ್ಯ ಜಿಲ್ಲೆ ಜನ ಬೇಸತ್ತಿದ್ದಾರೆ. ಜತೆಗೆ ಬಿಜೆಪಿ ಪರವಾದ ಭರವಸೆಯನ್ನು ಜನರು ತೋರುತ್ತಿದ್ದಾರೆ. ಕೆ.ಆರ್.ಪೇಟೆ ಗೆಲುವು ಮುಂದಿನ ವಿಧಾನಸಭೆ ಗೆಲ್ಲಲು ಪ್ರೇರಣೆಯಾಗಿದೆ. ಚುನಾವಣೆ ಹತ್ತಿರ ಬಂದಿರುವುದರಿಂದ ಈಗ ಉಸ್ತುವಾರಿ ಮಾತೇಕೆ. ಮಂಡ್ಯ ಉಸ್ತುವಾರಿಯನ್ನ ಬಿಜೆಪಿ ಪಕ್ಷವೇ ತೆಗೆದುಕೊಂಡಿದೆ. ಪಕ್ಷ ನನಗೆ ಯಾವುದೇ ಜಿಲ್ಲೆ ಉಸ್ತುವಾರಿ ಕೊಟ್ಟರೂ ನಿಭಾಯಿಸಲಿದ್ದೇನೆ ಎಂದರು.
ಕಾಂಗ್ರೆಸ್‌ನ ಕಿವಿ ಮೇಲೆ ಹೂ ಅಭಿಯಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಚುನಾವಣೆಯಲ್ಲಿ ರಾಜ್ಯದ ಜನರೇ ಕಾಂಗ್ರೆಸ್ ನಾಯಕರ ಕಿವಿಗೆ ಹೂ ಮುಡಿಸಲಿದ್ದಾರೆ ಎಂದು ವ್ಯಂಗ್ಯವಾಡಿದ ಅವರು, ವಿಧಾನಸೌಧದ 3ನೇ ಮಹಡಿಯಲ್ಲಿ(ಸರ್ಕಾರ) ಕೆಲಸ ಮಾಡಲು ಅವಕಾಶ ಕೊಡಿ ಎಂಬ ಡಿಕೆಶಿ ಹೇಳಿಕೆಗೆ ಅವರ ಕಟ್ಟಡದಲ್ಲೇ 5 ಮಹಡಿ ಇದೆ, 3ನೇ ಮಹಡಿ ಏಕೆ?. ಕಾಂಗ್ರೆಸ್‌ನಲ್ಲಿ ಬಹಳಷ್ಟು ಜನ ಈಗಾಗಲೇ ಸಿಎಂ ಆಗಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಅವರಿಗೆಲ್ಲ ನಿರಾಸೆ ಆಗಲಿದೆ ಎಂದು ತಿರುಗೇಟು ನೀಡಿದರು.
ಮೊಳಗಿದ ಮುಂದಿನ ಸಿಎಂ ಘೋಷಣೆ: ಹೊಳಲು ಗ್ರಾಮದಲ್ಲಿ ಅದ್ದೂರಿ ಸ್ವಾಗತ ನೀಡಿದ ಪಕ್ಷದ ಕಾರ್ಯಕರ್ತರು ಮುಂದಿನ ಸಿಎಂ ಬಿ.ವೈ.ವಿಜಯೇಂದ್ರ ಎನ್ನುವ ಘೋಷಣೆ ಮೊಳಗಿಸಿದರು. ಅಂತೆಯೇ ಗ್ರಾಮದಲ್ಲಿ ಜಯಚಾಮರಾಜೆಂದ್ರ ಒಡೆಯರ್, ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ಮಾಜಿ ಶಾಸಕ ಡಾ.ಎಚ್.ಡಿ.ಚೌಡಯ್ಯ ಪುತ್ಥಳಿಗೆ ಬಿವೈವಿ ಮಾಲಾರ್ಪಣೆ ಮಾಡಿದರು. ಇದಕ್ಕೂ ಮೊದಲು ಇತ್ತೀಚೆಗೆ ಮಾಜಿ ಎಂಎಲ್‌ಸಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಚ್.ಹೊನ್ನಪ್ಪ ನಿಧನರಾದ ಹಿನ್ನೆಲೆಯಲ್ಲಿ ಇಂಡುವಾಳು ಗ್ರಾಮಕ್ಕೆ ತೆರಳಿ ಅವರ ಕುಟುಂಬದವರಿಗೆ ಸಾಂತ್ವಾನ ಹೇಳಿದರು. ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಇದ್ದರು.