ಇಂಟರ್‌ಸಿಟಿ ರೈಲಿನಲ್ಲಿ ಬಿ.ವೈ.ರಾಘವೇಂದ್ರ ಮತಯಾಚನೆ

b.y.raghavendra polling in the train
ತಾಳಗುಪ್ಪದಿಂದ ಬೆಂಗಳೂರಿಗೆ ಹೋಗುವ ಇಂಟರ್‌ಸಿಟಿ ರೈಲಿನಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪ್ರಚಾರ ನಡೆಸಿದರು. ಎಸ್.ಎನ್.ಚನ್ನಬಸಪ್ಪ ಇದ್ದರು.
Published on

ಶಿವಮೊಗ್ಗ: ಮೂರು ಬಾರಿ ಸಂಸದರಾದ ಅವಧಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ರೈಲ್ವೆ, ರನ್‌ವೇ ಹಾಗೂ ಹೈವೇ ಮೂರು ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವಲ್ಲಿ ಯಶಸ್ವಿಯಾಗಿದ್ದು, ಮುಂದಿನ ಅವಧಿಯಲ್ಲಿ ಮತ್ತಷ್ಟು ಕೆಲಸ ಮಾಡಲು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವಂತೆ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಕೋರಿದರು.

ತಾಳಗುಪ್ಪದಿಂದ ಬೆಂಗಳೂರಿಗೆ ಹೋಗುವ ಇಂಟರ್‌ಸಿಟಿ ರೈಲಿನಲ್ಲಿ ಭಾನುವಾರ ಬೆಳಗ್ಗೆ ಪ್ರಯಾಣಿಕರನ್ನು ಭೇಟಿ ಮಾಡಿ ತಮ್ಮ ಸಾಧನೆಯ ಸಮಗ್ರ ಪ್ರತಿಯನ್ನು ಪ್ರಯಾಣಿಕರಿಗೆ ನೀಡಿ ಮತಯಾಚಿಸಿದರು.
ಕೇಂದ್ರ ಸರ್ಕಾರದಿಂದ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ತರುವ ಗುರಿ ಹೊಂದಿದ್ದೇನೆ. ಇದು ಕೇವಲ ಟ್ರೈಲರ್ ಮಾತ್ರ ಇನ್ನೂ ಪಿಕ್ಚರ್ ಬಾಕಿಯಿದೆ. ಅದನ್ನು ನಿಮ್ಮೆಲ್ಲರ ಆಶೀರ್ವಾದದಿಂದ ಪೂರೈಸುತ್ತೇನೆ ಎಂಬ ವಿಶ್ವಾಸವಿದೆ ಎಂದರು.
ನಾನು ಸಂಸದನಾಗುವ ಮೊದಲು ಕೇವಲ ಬೆರಳೆಣಿಕೆಯಷ್ಟು ರೈಲುಗಳು ಶಿವಮೊಗ್ಗ ನಗರಕ್ಕೆ ಬರುತ್ತಿದ್ದವು. ಈಗ ಮಹಾನಗರಗಳೂ ಸೇರಿ ಹಲವು ನಗರ ಹಾಗೂ ಜಿಲ್ಲೆಗಳಿಗೆ ಶಿವಮೊಗ್ಗ ನಗರದಿಂದ ರೈಲ್ವೆ ಸಂಪರ್ಕವನ್ನು ಕಲ್ಪಿಸಲಾಗಿದೆ. ಇದು ರೈಲ್ವೆ ಕ್ಷೇತ್ರದಲ್ಲಿ ಅಲ್ಪಾವಧಿಯಲ್ಲಿ ಮಾಡಿದ ಸಾಧನೆಯಾಗಿದೆ ಎಂದು ಹೇಳಿದರು.
ಭದ್ರಾವತಿ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿರುವ ವಿಶ್ವೇಶ್ವರಯ್ಯ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ರಾಘವೇಂದ್ರ, ಅಲ್ಲಿ ನೆರೆದಿದ್ದ ಜನರನ್ನು ಸಂಪರ್ಕಿಸಿ ಮತ ನೀಡುವಂತೆ ಮನವಿ ಮಾಡಿದರು. ಶಾಸಕ ಎಸ್.ಎನ್.ಚನ್ನಬಸಪ್ಪ, ಪ್ರಶಾಂತ್ ಕುಕ್ಕೆ, ಭದ್ರಾವತಿ ಬಿಜೆಪಿ ಮುಖಂಡ ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ರಾಹುಲ್ ಬಿದರೆ, ಕೂಡ್ಲಿಗೆರೆ ಹಾಲೇಶಪ್ಪ, ರಾಜು ತಲ್ಲೂರು, ಆನಂದ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net