ರಾಜ್ಯ ಸರ್ಕಾರಕ್ಕೆ ರೈತರ ಹಿತ ಬೇಕಿಲ್ಲ:ಬಿ.ವೈ.ವಿಜಯೇಂದ್ರ

b.v.vijayendra hits congress kustagi koppal
ಕುಷ್ಟಗಿ ಮಾರ್ಗವಾಗಿ ಲಿಂಗಸುಗೂರಿಗೆ ತೆರಳುತ್ತಿದ್ದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರರನ್ನು ಪಕ್ಷದ ಕಾರ್ಯಕರ್ತರು ಸನ್ಮಾನಿಸಿದರು. ಮಂಡಲ ಅಧ್ಯಕ್ಷ ಬಸವರಾಜ ಹಳ್ಳೂರು, ಯುವ ಮೋರ್ಚಾ ಅಧ್ಯಕ್ಷ ಉಮೇಶ ಯಾದವ್, ಪುರಸಭೆ ಸದಸ್ಯ ಜಿ.ಕೆ.ಹಿರೇಮಠ, ಪ್ರಮುಖರಾದ ಶರಣು ತಳ್ಳಿಕೇರಿ, ಶಶಿಧರ ಕವಲಿ ಇತರರು ಇದ್ದರು.
Published on

ಕೊಪ್ಪಳ (ಕುಷ್ಟಗಿ):ರಾಜ್ಯ ಸರ್ಕಾರದ ಮೊದಲ ಆದ್ಯತೆ ಪಕ್ಷದ ಶಾಸಕರು ಹಾಗೂ ಮಂತ್ರಿಗಳಾಗಿದ್ದಾರೆ. ಈ ಸರ್ಕಾರಕ್ಕೆ ರೈತರ ಹಿತ ಬೇಕಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದರು.

ಲಿಂಗಸುಗೂರಿನಲ್ಲಿ ನಡೆಯುತ್ತಿರುವ ರಂಭಾಪುರಿ ಶ್ರೀಗಳ ದಸರಾ ಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಅವರು ಮಾರ್ಗಮಧ್ಯೆ ಪಟ್ಟಣದಲ್ಲಿ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಶುಕ್ರವಾರ ಮಾತನಾಡಿದರು.

ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ. ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತೆ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ರೈತರಿಗೆ ಮಧ್ಯಂತರ ಪರಿಹಾರ ನೀಡಲು ಮೀನಮೇಷ ಎಣಿಸುತ್ತಿರುವ ಸರ್ಕಾರ ಮಂತ್ರಿಗಳಿಗೆ ಗೂಟದ ಕಾರು ಖರೀದಿಸ ಹೊರಟಿದೆ.

ರಾಜ್ಯ ಸರ್ಕಾರದ ಆಡಳಿತ ವೈಖರಿ ಹೇಗಿದೆ ಎಂಬುದು ಐಟಿ ದಾಳಿಯಿಂದ ಗೊತ್ತಾಗುತ್ತಿದೆ. ಕೇಂದ್ರ ಸರ್ಕಾರದ ಸಹಕಾರ ಬೇಕೆಂದರೆ ಅದರಂತೆ ರಾಜ್ಯ ಸರ್ಕಾರವೂ ನಡೆದುಕೊಳ್ಳಬೇಕು.

ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರ ನೇರ ರೈತರ ಖಾತೆಗಳಿಗೆ ಹಣ ಜಮಾ ಮಾಡುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗ ನೀಡುತ್ತಿದ್ದ 4ಸಾವಿರ ರೂ.ಗಳ ಸಮ್ಮಾನ್ ನಿಧಿ ಯೋಜನೆಗೂ ರಾಜ್ಯ ಸರ್ಕಾರ ಕೊಕ್ಕೆ ಹಾಕಿದೆ.

ದುರಾಡಳಿತದಲ್ಲಿ ತೊಡಗಿಕೊಂಡಿರುವ ಸರ್ಕಾರಕ್ಕೆ ಕೇಂದ್ರ ಸರ್ಕಾರವನ್ನು ದೂಷಿಸುವ ನೈತಿಕತೆ ಇಲ್ಲ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಬಸವರಾಜ ಹಳ್ಳೂರು, ಯುವ ಮೋರ್ಚಾ ಅಧ್ಯಕ್ಷ ಉಮೇಶ ಯಾದವ್, ಪುರಸಭೆ ಸದಸ್ಯ ಜಿ.ಕೆ.ಹಿರೇಮಠ, ಪ್ರಮುಖರಾದ ಶರಣು ತಳ್ಳಿಕೇರಿ, ಶಶಿಧರ ಕವಲಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net