

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ನರ್ಸ್ಗಳು ಮತ್ತು ಕಿರಿಯ ಆರೋಗ್ಯ ಸಹಾಯಕರಿಗೆ ಆರು ತಿಂಗಳಿನಿಂದ ಬಾಕಿ ಇರುವ ವೇತನ ಪಾವತಿಗೆ ಹಣ ಒದಗಿಸುವಂತೆ ಆರ್ಥಿಕ ಇಲಾಖೆಗೆ ಪತ್ರ ಬರೆದಿರುವುದಾಗಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.
ಒಟ್ಟು 36 ಕೋಟಿ ರೂ. ಬಾಕಿ ಇದೆ. ತಕ್ಷಣ ಬಿಡುಗಡೆಗೆ ಕೇಳಿದ್ದೇನೆ. ಕೆಲಕಡೆ ಜಿಲ್ಲಾ ಪಂಚಾಯತ್, ಇನ್ನೂ ಕೆಲವೆಡೆ ಕೇಂದ್ರದ ಪ್ರಾಯೋಜಿತ ಯೋಜನೆಯಿಂದ ವೇತನ ಕೊಡಬೇಕಾಗಿದೆ. ಅಲ್ಲಿ ಸಮಸ್ಯೆಯಾಗಿದ್ದರಿಂದ ಪಾವತಿಯಾಗಿಲ್ಲ. ಇಂತಹ ಸಂಕಷ್ಟ ಸಂದರ್ಭದಲ್ಲಿ ದುಡಿಯುತ್ತಿರುವ ಅವರಿಗೆ ಒಂದು ವಾರದಲ್ಲಿ ವೇತನ ಕೊಡಿಸಲು ವ್ಯವಸ್ಥೆ ಮಾಡುತ್ತೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಆಂಬುಲೆನ್ಸ್ ಕ್ಲಿನಿಕ್: ರಾಜ್ಯದಲ್ಲಿ 28 ಆಂಬುಲೆನ್ಸ್ ಫೀವರ್ ಕ್ಲಿನಿಕ್ ಆರಂಭಿಸಲಾಗುತ್ತದೆ. ಇವು ಮನೆ ಮನೆಗೆ ತೆರಳಿ ತಪಾಸಣೆ ಮಾಡಲಿವೆ. 108 ಆಂಬುಲೆನ್ಸ್ ನಲ್ಲಿಯೇ 28 ಫೀವರ್ ಕ್ಲಿನಿಕ್ ಮಾಡಲಾಗುತ್ತದೆ. ಎರಡನೇ ಹಂತದ ಟೆಸ್ಟ್ ಮಾಡಲು ಆಂಬುಲೆನ್ಸ್ ಫೀವರ್ ಕ್ಲಿನಿಕ್ ಮಾಡಲು ನಿರ್ಧಾರ ಮಾಡಿದ್ದೇವೆ ಇನ್ನೆರಡು ದಿನದಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಮಾಡುತ್ತೇವೆ ಎಂದರು. ರಾಜ್ಯದಲ್ಲಿ ಕರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಮುಂದಿನ ಹತ್ತು ದಿನ ಬಹಳ ಮುಖ್ಯ. ಈ ಅವಧಿಯಲ್ಲಿ ಸೋಂಕು ನಿಯಂತ್ರಣ ಮಾಡಲೇಬೇಕಾಗಿದೆ ಎಂದ ಶ್ರೀರಾಮುಲು, ಲಾಕ್ಡೌನ್ ಇದ್ದರು ಜನ ಬೀದಿಗೆ ಬರುತ್ತಿದ್ದಾರೆ. ಇದರಿಂದ ವೈರಾಣು ಹೆಚ್ಚಾಗುವ ಅಪಾಯವಿದೆ ಎಂದು ತಿಳಿಸಿದರು.
ನಂಜನಗೂಡು ಹಾಗೂ ಬೆಂಗಳೂರಿನಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ. ನಂಜನಗೂಡಿನ ಜೂಬಿಲಿಯಂಟ್ ಕಾರ್ಖಾನೆ ಸುತ್ತಮುತ್ತ ಸೀಲ್ಡೌನ್ ಮಾಡಿ ಇತರೆಡೆ ವಿನಾಯಿತಿ ಕೊಡಬೇಕಿದೆ. ತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಂಡವರ ಪೈಕಿ ಬಹುತೇಕ ಎಲ್ಲರನ್ನೂ ಪತ್ತೆ ಹಚ್ಚಿ, ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಕೆಲವರು ನಮ್ಮ ಸಂಪರ್ಕಕ್ಕೆ ಬರುತ್ತಿಲ್ಲ. ಅವರೇ ಸ್ವಯಂ ಪ್ರೇರಿತರಾಗಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.