

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುವ ಬೃಹತ್ ಯೋಜನೆಗಳ ಪೈಕಿ 5 ಪ್ರಾಜೆಕ್ಟ್‌ಗಳನ್ನು ಬೆಂಗಳೂರು ಸ್ಮಾರ್ಟ್ ಇನ್ಪ್ರಾಸ್ಟ್ರಕ್ಚರ್ ಲಿಮಿಟೆಡ್ ಸಂಸ್ಥೆಗೆ (ಬಿ-ಸ್ಮೈಲ್) ವಹಿಸಿ ನಗರಾಭಿವೃದ್ಧೀ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.
ಈ ಹಿಂದೆ ಅಸ್ತಿತ್ವದಲ್ಲಿದ್ದ ಬಿಬಿಎಂಪಿಯಲ್ಲಿ ಬೃಹತ್ ಯೋಜನೆಗಳನ್ನು ರಸ್ತೆ ಮೂಲಸೌಕರ್ಯ ವಿಭಾಗದಿಂದ ಕೈಗೆತ್ತಿಕೊಳ್ಳಲಾಗುತ್ತಿತ್ತು. ಜಿಬಿಎ ಆಗಿ ಪರಿವರ್ತನೆ ಆದ ಬಳಿಕ ಅಂತಹ ಯೋಜನೆಗಳನ್ನು ಬಿ-ಸ್ಮೈಲ್‌ಗೆ ವಹಿಸಲಾಗಿದೆ. ಸದ್ಯ ಬಿ-ಸ್ಮೈಲ್‌ನಲ್ಲಿ ಮೂರು ಮುಖ್ಯ ಅಭಿಯಂತರರ ಹುದ್ದೆ ಇದ್ದು, ಈ ಪೈಕಿ ಒಂದು ರಸ್ತೆ ಮೂಲಸೌಕರ್ಯ ವಿಭಾಗವಾಗಿ ಗುರುತಿಸಿ ಐದೂ ಪ್ರಾಜೆಕ್ಟ್‌ಗಳ ಅನುಷ್ಠಾನದ ಹೊಣೆಯನ್ನು ವಹಿಸಲಾಗಿದೆ.
ಐದೂ ಯೋಜನೆಗಳ ಒಟ್ಟು ಮೊತ್ತ 2,660 ಕೋಟಿ ರೂ. ಆಗಿದೆ. ಈ ಪ್ರಾಜೆಕ್ಟ್‌ಗಳನ್ನು ಜಾರಿ ಮಾಡಲು ಮರು ಹಂಚಿಕೆ ಮಾಡಲಾದ ಮುಖ್ಯ ಅಭಿಯಂತರರ ಹುದ್ದೆಗೆ ಡಾ. ಬಿ.ಜಿ. ರಾಘವೇಂದ್ರ ಪ್ರಸಾದ್ ಅವರನ್ನು ಹೆಚ್ಚುವರಿ ಪ್ರಭಾರದಲ್ಲಿ ನಿಯೋಜಿಸಲಾಗಿದೆ. ಎಲ್ಲ ಮುಖ್ಯ ಅಭಿಯಂತರರು ಬಿ-ಸ್ಮೈಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಬಿ-ಸ್ಮೈಲ್‌ಗೆ ವಹಿಸಿರುವ ಯೋಜನೆಗಳಿವು:
ವೈಟ್ ಟಾಪಿಂಗ್ ಕ್ರಿಯಾ ಯೋಜನೆ (800 ಕೋಟಿ ರೂ.), ಈಜಿಪುರ ಮೇಲ್ಸೇತುವೆ ಪ್ರಾಜೆಕ್ಟ್ (307 ಕೋಟಿ ರೂ.), ಬೈಯಪ್ಪನಹಳ್ಳಿ ಬಳಿ ರೋಟರಿ ಫ್ಲೈಓವರ್, ರೈಲ್ವೆ ಮೇಲ್ಸೇತುವೆ (380 ಕೋಟಿ ರೂ.), ಹೈ ಡೆನ್ಸಿಟಿ ಕಾರಿಡಾರ್ (273 ಕೋಟಿ ರೂ.) ಹಾಗೂ ವೈಟ್ ಟಾಪಿಂಗ್ ಕಾಮಗಾರಿ ಕ್ರಿಯಾ ಯೋಜನೆ (900 ಕೋಟಿ ರೂ.).