ಬಿ.ಶೆಟ್ಟಿಗೇರಿ ಗ್ರಾಪಂಗೆ ಶಾಸಕ ಪೊನ್ನಣ್ಣ ಭೇಟಿ

28 gkp 06
Published on

ಗೋಣಿಕೊಪ್ಪ: ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿಗೆ ಗುರುವಾರ ಭೇಟಿ ನೀಡಿದ್ದ ಶಾಸಕ ಎ.ಎಸ್.ಪೊನ್ನಣ್ಣ ವಿವಿಧ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿದರು. ಗ್ರಾಮಸ್ಥರ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ನಿರ್ದೇಶನ ನೀಡಿದರು.

ಗ್ರಾಮದ ಹಿರಿಯರಾದ ಉಮೇಶ್ ಕೇಚಮಯ್ಯ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆಯಿಂದ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ. ಬಹುತೇಕ ವಿದ್ಯುತ್ ಕಂಬಗಳು ರೈತರ ಭತ್ತದ ಗದ್ದೆ ಹಾಗೂ ತೋಟದಲ್ಲಿ ಹಾದು ಹೋಗಿವೆ. ಬಹಳ ಹಳೆಯದಾದ ಕಾರಣ ಬೀಳುವ ಹಂತದಲ್ಲಿವೆ. ಇವುಗಳನ್ನು ಬದಲಾಯಿಸುವಂತೆ ಮನವಿ ಮಾಡಿದರು.

ವಿರಾಜಪೇಟೆ ವಲಯದ ಸೆಸ್ಕ್ ಎಇಇ ಸುರೇಶ್ ಮಾತನಾಡಿ, ವಿದ್ಯುತ್ ಮಾರ್ಗದ ಬದಲಾವಣೆಗೆ ಈಗಾಗಲೇ ಇಲಾಖೆಗೆ ಪತ್ರ ಬರೆಯಲಾಗಿದೆ. ಅನುಮತಿ ಸಿಗುವ ನಿರೀಕ್ಷೆ ಇದೆ ಎಂದು ಶಾಸಕರ ಗಮನಕ್ಕೆ ತಂದರು. ಕೂಡಲೇ ಮೈಸೂರಿನ ಹಿರಿಯ ಸೆಸ್ಕ್ ಅಧಿಕಾರಿಗಳ ಜತೆ ದೂರವಾಣಿಯಲ್ಲಿ ಮಾತನಾಡಿದ ಶಾಸಕರು, ಸಮಸ್ಯೆಗೆ ಕೂಡಲೇ ಪರಿಹಾರ ಕಂಡುಕೊಳ್ಳುವಂತೆ ನಿರ್ದೇಶನ ನೀಡಿದರು.

ಇದೇ ವೇಳೆ ಶಾಸಕರು ಗ್ರಾಪಂ ಆವರಣದಲ್ಲಿ ನಿರ್ಮಿಸಿರುವ ಉದ್ಯಾನ ಹಾಗೂ ಡಿಜಿಟಲ್ ಗ್ರಂಥಾಲಯವನ್ನು ಉದ್ಘಾಟಿಸಿದರು. ಗ್ರಾಪಂ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು. ಗ್ರಾಪಂ ಅಧ್ಯಕ್ಷ ಕೊಲ್ಲೀರ ಬೋಪಣ್ಣ ಅಧ್ಯಕ್ಷತೆ ವಹಿಸಿದ್ದರು. ತಾಪಂ ಇಒ ಕೆ.ಸಿ.ಅಪ್ಪಣ್ಣ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಕಾಂಗ್ರೆಸ್ ಪಕ್ಷದ ಹಿರಿಯರಾದ ಪೆಮ್ಮಂಡ ಕೆ.ಪೊನ್ನಪ್ಪ, ಮೂಕಳೇರ ಕುಶಾಲಪ್ಪ, ಚೇರಂಡ ಮೋಹನ್, ಗ್ರಾಮದ ಪ್ರಮುಖರಾದ ಕಡೇಮಾಡ ಕುಸುಮ ಜೋಯಪ್ಪ, ತೀತಿಮಾಡ ಸದಾ, ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net