ಕರ್ನಾಟಕದ ಒಂದಿಂಚೂ ಕೊಡೋಲ್ಲ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ

yadiyyurappa
Published on

ಉಡುಪಿ: ಮರಾಠಿ ಭಾಷೆ ಮತ್ತು ಸಂಸ್ಕೃತಿ ಪ್ರಧಾನ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವ ಮಹರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಕರ್ನಾಟಕ ರಾಜ್ಯದ ಒಂದಿಂಚು ಜಾಗವನ್ನೂ ಕೊಡೋದಿಲ್ಲ ಎಂದು ಗುಡುಗಿದ್ದಾರೆ.

ಉಡುಪಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದ್ಧವ್ ಠಾಕ್ರೆ ಹೇಳಿಕೆ ಭಾರತದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ನಿಲುವು. ಮಹಾಜನ್ ವರದಿ ಅಂತಿಮವೆಂದು ಗೊತ್ತಿದ್ದರೂ ಇಂತಹ ಉದ್ಧಟತನದ ಹೇಳಿಕೆ ನೀಡುವುದು ಸರಿಯಲ್ಲ. ರಾಜ್ಯದಲ್ಲಿ ಕನ್ನಡಿಗರು ಮತ್ತು ಮರಾಠಿಗರು ಒಂದೇ ತಾಯಿ ಮಕ್ಕಳಂತೆ ಬದುಕುತ್ತಿದ್ದಾರೆ. ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿ ಕನ್ನಡಿಗರು ಮರಾಠಿಗರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಸೌಹಾರ್ದಯುತ ವಾತಾವರಣ ಕೆಡಿಸುವ ಹಾಗೂ ಅಶಾಂತಿ ಮೂಡಿಸುವ ಕೆಲಸ ಮಹಾರಾಷ್ಟ್ರ ಸಿಎಂಗೆ ಗೌರವ ತರುವ ಸಂಗತಿಯಲ್ಲ. ಈ ರೀತಿಯ ಕೆಟ್ಟ ರಾಜಕಾರಣ ಅವರು ನಿಲ್ಲಿಸಬೇಕು. ಸಹಜವಾಗಿ ಇಂತಹ ಹೇಳಿಕೆಗಳು ಕನ್ನಡಿಗರಲ್ಲಿ ನೋವು, ಆಕ್ರೋಶ ಉಂಟು ಮಾಡುತ್ತವೆ. ಇಂತಹ ರಾಜಕೀಯ ಹೇಳಿಕೆಗಳಿಗೆ ತಲೆಕೆಡಿಸಿಕೊಳ್ಳಬಾರದು ಎಂದು ನಾನು ಕನ್ನಡ ಪರ ಸಂಘಟನೆ, ಜನತೆಯಲ್ಲಿ ವಿನಂತಿಸುತ್ತೇನೆ. ಇದು ರಾಜಕೀಯ ದುರುದ್ದೇಶದಿಂದ ಕೂಡಿದ ಹೇಳಿಕೆ. ಇದಕ್ಕೆ ಯಾರೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net