ಯಡಿಯೂರಪ್ಪ ನಮ್ಮ ಜಿಲ್ಲೆಯವರು ಎನ್ನುವ ಹೆಮ್ಮೆ ನನಗಿದೆ: ಬಿಎಸ್​ವೈ ಹುಟ್ಟುಹಬ್ಬ ಸಮಾರಂಭದಲ್ಲಿ ಎಸ್​.ಎಂ. ಕೃಷ್ಣ

SMK
Published on

ಬೆಂಗಳೂರು: ಕೆಲವು ಮುಖ್ಯಮಂತ್ರಿ ಕೈಯಲ್ಲಿ ಕಮಾಲ್ ಮಾಡುವ ಶಕ್ತಿ ಇರುತ್ತೆ. ಬಿ.ಎಸ್. ಯಡಿಯೂರಪ್ಪ ಅಂಥ ಕಮಾಲ್ ಮಾಡೋರು ಎಂದು ಮಾಜಿ ಮುಖ್ಯಮಂತ್ರಿ, ಹಿರಿಯ ಧುರೀಣ ಎಸ್​.ಎಂ. ಕೃಷ್ಣ ಹೇಳಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಹುಟ್ಟುಹಬ್ಬ ಸಮಾರಂಭದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ನಮ್ಮ ಜಿಲ್ಲೆಯವರು ಎನ್ನುವ ಹೆಮ್ಮೆ ಇದೆ ನನಗೆ. ಅವರು ನಮ್ಮ ಜಿಲ್ಲೆಯ ಎರಡನೇ ಮುಖ್ಯಮಂತ್ರಿ ಎಂದರು.

ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ಎದ್ದು ಕಾಣಿಸುವಂತೆ ನಮಗೆಲ್ಲ ತೋರಿಸಿಕೊಟ್ಟವರು ಯಡಿಯೂರಪ್ಪ, ಅವರ ಒಂದು ಮಾತು ನನ್ನ ಕಿವಿಯಲ್ಲಿ ಮಾರ್ಧನಿಸುತ್ತಿರುತ್ತೆ. ಯಡಿಯೂರಪ್ಪ ಅವರಿಗೆ ಭಯಂಕರ ಸಿಟ್ಟು ಬರುತ್ತೆ. ಆದರೆ ಆ ಸಿಟ್ಟು ಜಾಸ್ತಿ ಹೊತ್ತು ಇರಲ್ಲ. ಬಂದಷ್ಟೇ ವೇಗದಲ್ಲಿ ಸಿಟ್ಟು ಮಾಯವಾಗಿ ಬಿಡುತ್ತೆ ಎಂದರು.

ಸಿದ್ದರಾಮಯ್ಯ ಈ ಸಮಾರಂಭಕ್ಕೆ ಬಂದಿದ್ದು ನನಗೆ ವಿಶೇಷ ಸಮಾಧಾನ‌ ತಂದಿದೆ. ರಾಜಕಾರಣ ಹೀಗೆಯೇ ಇರಬೇಕು. ಭಿನ್ನಾಭಿಪ್ರಾಯಗಳಿರಬಹುದು. ಭಿನ್ನಾಭಿಪ್ರಾಯ ಹೊರತಾಗಿ ಮಾನವೀಯ ಸಂಬಂಧ, ಮೌಲ್ಯ ಮುಖ್ಯ. ರಾಜಕಾರಣ ಹೊರಗೆ ಮಾತ್ರ. ಇಲ್ಲಿ ಸೇರಿರುವುದು ರಾಜ್ಯದ ಅಭಿವೃದ್ಧಿಗೆ ತನ್ನೆಲ್ಲ ಶಕ್ತಿ ಧಾರೆ ಎರೆದ ನಾಯಕನಿಗೆ ಅಭಿಮಾನ, ಗೌರವ ತೋರಲು, ಇದೇ ಕರ್ನಾಟಕದ ಸಂಪ್ರದಾಯ. ಸಿದ್ದರಾಮಯ್ಯ ಬಂದಿದ್ದು ವಿಶೇಷ ಅನುಸಂಧಾನದ ಸಂಕೇತ ಎಂದು ಶ್ಲಾಘಿಸಿದರು.

ಯಡಿಯೂರಪ್ಪ ನನಗಿಂತ ಹತ್ತು ವರ್ಷ ಚಿಕ್ಕವರು. ನಾನು ಯಡಿಯೂರಪ್ಪ ಅವರಿಗೆ ಶುಭ ಹಾರೈಸಲೂಬಹುದು, ಆಶೀರ್ವದಿಸಲೂಬಹುದು. ಇದು ನನ್ನ ವಯಸ್ಸು ತಂದು ಕೊಟ್ಟಿರುವ ಸನ್ನಿವೇಶ. ಯಡಿಯೂರಪ್ಪ ‌ಅಭಿವೃದ್ಧಿ‌ ಕಾರ್ಯ ಹೀಗೇ ಮುಂದುವರಿಸಲಿ ಎಂದು ಎಸ್ಸೆಂ ಕೃಷ್ಣ ಹಾರೈಸಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net