ಜನಪ್ರತಿನಿಧಿಗಳ ಬೇಡಿಕೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅಸ್ತು

Screenshot_20200623-152148
Published on

ಕೋಲಾರ: ಚಾಲ್ತಿಯಲ್ಲಿರುವ ನೀರಾವರಿ ಯೋಜನೆಗಳ ಮೂಲಕ ಜಿಲ್ಲೆಯ ಪಾಲಿನ ನೀರನ್ನು ತ್ವರಿತಗತಿಯಲ್ಲಿ ಒದಗಿಸುವಂತೆ ಮಂಗಳವಾರ ಸಿಎಂ ಬಿ.ಎಸ್.ಯಡಿಯೂರಪ್ಪ ಬಳಿಗೆ ನಿಯೋಗ ತೆರಳಿದ್ದ ಜಿಲ್ಲೆಯ ಜನಪ್ರತಿನಿಧಿಗಳಿಗೆ ಸಕಾರಾತ್ಮಕ ಸ್ಪಂದನೆ ದೊರೆತಿದೆ.

ಕೆಸಿ ವ್ಯಾಲಿ ಯೋಜನೆ ಮೂಲಕ 400 ಎಂಎಲ್‌ಡಿ ನೀರು ಹರಿಸಿ 126 ಕೆರೆಗಳನ್ನು ತುಂಬಿಸಬೇಕು, ಯರಗೋಳ್ ಯೋಜನೆ ಕಾಮಗಾರಿ ಶೇ.75 ಪೂರ್ಣಗೊಂಡಿದ್ದು ಉಳಿಕೆ ಕಾಮಗಾರಿಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕು, ಎತ್ತಿನಹೊಳೆ ಯೋಜನೆ ಕಾಮಗಾರಿ ಚುರುಕುಗೊಳಿಸಬೇಕು ಎಂಬ ಮನವಿಗೆ ಯೋಜನೆಗಳನ್ನು ಕಾಲಮಿತಿಯಲ್ಲಿ ಈಡೇರಿಸಲಾಗುವುದು ಎಂದು ಸಿಎಂ ಭರವಸೆ ನೀಡಿದರು. '

ಕೆಸಿ ವ್ಯಾಲಿ ಯೋಜನೆ ಮೂಲಕ ಉಳಿದ ಕೆರೆಗಳಿಗೆ ನೀರು ಹರಿಯುವುದು ವಿಳಂಬವಾಗಿದ್ದು, ನೀರಿನ ಹರಿವಿನ ಪ್ರಮಾಣ ಹೆಚ್ಚಿಸಬೇಕೆಂದು ಸಿಎಂ ಗಮನಕ್ಕೆ ತಂದಾಗ, ಪ್ರಸ್ತುತ 260ರಿಂದ 284 ಎಂಎಲ್‌ಡಿ ನೀರನ್ನು ಎಸ್‌ಟಿಪಿಎಸ್ ಮೂಲಕ ಹರಿಸಲಾಗುತ್ತಿದೆ, ಮೂಲ ಯೋಜನೆಯಡಿ 400 ಎಂಎಲ್‌ಡಿ ನೀರು ಒದಗಿಸಲು ತಾಂತ್ರಿಕ ಕಾರಣಗಳಿಂದ ಸಾಧ್ಯವಾಗುತ್ತಿಲ್ಲ ಎಂದು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದರು.

ಸಬೂಬು ಹೇಳದೆ ನೀರಿನ ಹರಿವು ಸಾಮರ್ಥ್ಯ ಹೆಚ್ಚಿಸಿ ಎಂದು ಸಿಎಂ ತಾಕೀತು ಮಾಡಿದರು.

ಶಾಸಕ ಕೃಷ್ಣಬೈರೇಗೌಡ ಮಾತನಾಡಿ, ಕೋಲಾರ ಜಿಲ್ಲೆಯ ಎಲ್ಲ ಶಾಸಕರ ಆಶಯದಂತೆ ಕೆರೆಗಳಿಗೆ ನೀರು ತುಂಬಿಸುವ ಕೆಲಸವಾಗುತ್ತಿದ್ದರೂ 400 ಎಂಎಲ್‌ಡಿ ನೀರು ಸಿಗದಿರುವುದರಿಂದ ಜನರ ನಿರೀಕ್ಷೆ ಪೂರೈಸಲಾಗುತ್ತಿಲ್ಲ ಎಂದರು.

ಶಾಸಕರಾದ ಕೆ.ವೈ.ನಂಜೇಗೌಡ ಹಾಗೂ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, ನೀರು ಎಲ್ಲ ದಿಕ್ಕುಗಳಿಗೆ ಸಮಾನವಾಗಿ ಹರಿಯುವಂತಾಗಬೇಕು ಎಂದರು.

ಪ್ರತಿಕ್ರಿಯಿಸಿದ ಸಿಎಂ, ತಾಂತ್ರಿಕ ಸಮಸ್ಯೆ ನಿವಾರಿಸಿ 3 ತಿಂಗಳೊಳಗೆ 400 ಎಂಎಲ್‌ಡಿ ನೀರು ಹರಿಸಿ ಕೆರೆ ಭರ್ತಿ ಮಾಡಬೇಕೆಂದು ಅಧಿಕಾರಿಗಳಿಗೆ ಗಡುವು ನೀಡಿದರು.

ಭೂ ಸಮಸ್ಯೆ ನಿವಾರಿಸಲು ತಂಡ ರಚನೆ: ಸಕಲೇಶಪುರದಿಂದ ಪ್ರಾರಂಭವಾದ ಎತ್ತಿನಹೊಳೆ ಯೋಜನೆ ಕಾಮಗಾರಿ ತುಮಕೂರಿನ ಕೊರಟಗೆರೆವರೆಗೆ ಸಾಗಿದ್ದು ಭೂ ಸ್ವಾಧೀನಕ್ಕೆ ರೈತರಿಂದ ವಿರೋಧ ವ್ಯಕ್ತವಾಗಿರುವುದರಿಂದ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಗಮನ ಸೆಳೆದರು.

ಕಾಮಗಾರಿ ವಿಳಂಬದಿಂದ ಯೋಜನಾ ಗಾತ್ರ 24000 ಕೋಟಿ ರೂ. ಆಗಿದೆ. ಕೊರಟಗೆರೆಯ ರೈತರು ಸರ್ಕಾರ ನಿಗದಿ ಮಾಡಿರುವ ದರಕ್ಕೆ ಭೂಮಿ ಮಾರಾಟ ಮಾಡಲು ಒಪ್ಪುತ್ತಿಲ್ಲವಾದ್ದರಿಂದ ರೈತರ ಮನವೊಲಿಸಿ ಕಾಮಗಾರಿಗೆ ಚುರುಕು ನೀಡುವ ಸಲುವಾಗಿ ಅಧಿಕಾರಿಗಳ ತಂಡ ರಚಿಸಲು ನಿರ್ಧರಿಸಿದ್ದೇನೆ ಎಂದು ಸಿಎಂ ಆಶ್ವಾಸನೆ ನೀಡಿದರು.

ಜನವರಿಯಲ್ಲಿ ಯರಗೋಳ್‌ಗೆ ಮೋಕ್ಷ: ಕೋಲಾರ ನಗರ, ಬಂಗಾರಪೇಟೆ ಮತ್ತು ಮಾಲೂರು ಪಟ್ಟಣ ಹಾಗೂ 45 ಹಳ್ಳಿಗಳಿಗೆ ಕುಡಿಯುವ ನೀರೊದಗಿಸುವ ಯರಗೋಳ್ ಯೋಜನೆ ಕಾಮಗಾರಿ ಶೇ.75 ಪೂರ್ಣಗೊಂಡಿದೆ, ಡ್ಯಾಂನಿಂದ ನೀರು ಪಂಪ್ ಮಾಡಲು 800 ಎಚ್‌ಪಿ ಸಾಮರ್ಥ್ಯದ ಮೋಟಾರ್ ಖರೀದಿಸಿ ಅಳವಡಿಸಲು ಕನಿಷ್ಠ 6 ತಿಂಗಳು ಬೇಕಾಗುತ್ತದೆ. ಯೋಜನಾ ಗಾತ್ರ ಪರಿಷ್ಕರಿಸಬೇಕಾಗಿರುವುದರಿಂದ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕೆಂದು ನಿಯೋಗ ಕೋರಿತು.

ಈ ಬೇಡಿಕೆಗೂ ಎಸ್ ಎಂದ ಸಿಎಂ ಪರಿಷ್ಕೃತ ದರ ಸಂಬಂಧ ಪ್ರಸ್ತಾವನೆ ಸಲ್ಲಿಸಿದಲ್ಲಿ ಹಣಕಾಸು ನೆರವು ಒದಗಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರಲ್ಲದೆ, 2021ರ ಜನವರಿ 27ಕ್ಕೆ ಯರಗೋಳ್ ಯೋಜನೆ ಉದ್ಘಾಟನೆಗೆ ಸಿದ್ಧತೆ ಕೈಗೊಳ್ಳಿ ಎಂದು ಸೂಚಿಸಿದರು.

ಗೌಡರಿಂದ ನೆನಪು: ಯರಗೋಳ್ ಯೋಜನೆಗೆ 2006ರಲ್ಲಿ ಶಂಕುಸ್ಥಾಪನೆ ನೆರವೇರಿತು, ಡಿಸಿಎಂ ಆಗಿದ್ದಾಗ ಯೋಜನೆಗೆ ಬಜೆಟ್‌ನಲ್ಲಿ 50 ಕೋಟಿ ರೂ. ಮೀಸಲಿಟ್ಟು ಯೋಜನೆ ಚಾಲ್ತಿಗೆ ಸಹಕರಿಸಿದ್ದೀರಿ ಎಂದು ಶಾಸಕ ಕೆ.ಶ್ರೀನಿವಾಸಗೌಡ ನೆನಪು ಮಾಡಿದರು. ಬೃಹತ್ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ, ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್, ಸಂಸದ ಎಸ್.ಮುನಿಸ್ವಾಮಿ, ಶಾಸಕಿ ರೂಪಕಲಾ, ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ನಸೀರ್ ಅಹ್ಮದ್, ನೀರಾವರಿ ಇಲಾಖೆ ಹಾಗೂ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net